ಬೆಂಗಳೂರು : ಜೂನ್ 15ರವರೆಗೆ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಮನವಿ ಮಾಡಿಕೊಳ್ಳುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಮುಖ್ಯಮಂತ್ರಿಗಳು ನಗರದ ಶಾಸಕರ ಸಭೆಯನ್ನೂ ಕರೆದಿದ್ದಾರೆ. ಅಲ್ಲಿಯೂ ಲಾಕ್ ಡೌನ್ ಮುಂದುವರೆಸಲು ಮನವಿ ಮಾಡುತ್ತೇನೆ. ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇನ್ನೂ ಇಳಿಮುಖ ಆಗಬೇಕಾಗಿದೆ. ಇಡೀ ರಾಜ್ಯದಲ್ಲಿ 500ರೊಳಗೆ ಸೋಂಕಿತರ ಸಂಖ್ಯೆ ಇಳಿಮುಖವಾಗಬೇಕಾಗಿದೆ. ಅದಕ್ಕೆ ಲಾಕ್ ಡೌನ್ ಅನಿವಾರ್ಯ. ಕೊರೊನಾ ಮೂರನೇ ಅಲೆ ಏಳಬಹುದೆಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಲಾಕ್ ಡೌನ್ ವಿಸ್ತರಣೆ ಅನಿವಾರ್ಯವಾಗಿದೆ ಎಂದರು.
ಸಾರ್ವಜನಿಕರು ಪರಿಸ್ಥಿತಿ ಅರಿತುಕೊಂಡು ಸುರಕ್ಷಿತವಾಗಿರಲು ಮನೆಯಲ್ಲೇ ಇರಬೇಕು. ತೀರಾ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು ಎಂದರು.










