ನೇಪಾಳ : ಬುದ್ಧ ಪೂರ್ಣಿಮೆಯಂದು ಗೌತಮ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ. 2014ರಿಂದ ನೇಪಾಳಕ್ಕೆ ಪ್ರಧಾನಿಯವರ ಐದನೇ ಭೇಟಿ ಇದಾಗಿದೆ.
ಪ್ರಧಾನಿ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮತ್ತು ಅವರ ಪತ್ನಿ ಡಾ. ಅರ್ಜು ರಾಣಾ ದೇವುಬಾ ಅವರು ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಲುಂಬಿನಿ ಮೊನಾಸ್ಟಿಕ್ ವಲಯದಲ್ಲಿ ದೆಹಲಿಯ ಇಂಟರ್ ನ್ಯಾಷನಲ್ ಬೌದ್ಧ ಒಕ್ಕೂಟದ (ಐಬಿಸಿ) ಪ್ಲಾಟ್ ನಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯ ನೆರವೇರಿಸಿದರು.

ನಂತರ, ಪ್ರಧಾನಿ ಮೋದಿ ಮತ್ತು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ದೇವಾಲಯದ ಪಕ್ಕದಲ್ಲಿರುವ ಅಶೋಕ ಸ್ತಂಭದ ಬಳಿ ದೀಪ ಬೆಳಗಿಸಿದರು. ಇದೇ ವೇಳೆ, 2014ರಲ್ಲಿ ಮೋದಿ ಲುಂಬಿನಿ ವನಕ್ಕೆ ಕೊಡುಗೆಯಾಗಿ ನೀಡಿದ್ದ ಬೋಧಿ ವೃಕ್ಷದ ಸಸಿಗೆ ಉಭಯ ನಾಯಕರು ನೀರೆರೆದರು. ಈ ಕುರಿತಂತೆ ಚಿತ್ರ ಸಹಿತ ಪ್ರಧಾನಿ ಸಚಿವಾಲಯವು ಟ್ವೀಟ್ ಮಾಡಿದೆ.










