ಅಸ್ಸಾಂ: ಅಸ್ಸಾಂನ ಲೇಡಿ ಸಿಂಗಂ ಎಂದೇ ಖ್ಯಾತರಾಗಿದ್ದ ವಿವಾದಿತ ಮಹಿಳಾ ಸಬ್ ಇನ್ಸ್ಪೆಕ್ಟರ್ ಜುನ್ಮೋನಿ ರಾಭಾ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಕಲಿಯಾಬೋರ್ ಉಪವಿಭಾಗದ ಜಖಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದ ಬಳಿ ನಡೆದಿದೆ.
ನಾಗಾಂವ್ ಜಿಲ್ಲೆಯಲ್ಲಿ ಇವರು ವಿವಾದಗಳೊಂದಿಗೆ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದ್ದರು. ಇದೀಗ ಇವರು ಪ್ರಯಾಣಿಸುತ್ತಿದ್ದ ಕಾರು ಎದುರಿಗೆ ಬರುತ್ತಿದ್ದ ಕಂಟೈನರ್ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊರಿಕೊಲೊಂಗ್ ಪೊಲೀಸ್ ಪೋಸ್ಟ್ನ ಉಸ್ತುವಾರಿ ವಹಿಸಿದ್ದ ರಾಭಾ ಸೋಮವಾರ ತಮ್ಮ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 2.30ರ ಸುಮಾರಿಗೆ ಉತ್ತರ ಪ್ರದೇಶದಿಂದ ಬರುತ್ತಿದ್ದ ಕಂಟೈನರ್ ವಾಹನ ಹಾಗೂ ರಾಭಾ ಅವರ ಕಾರು ಪರಸ್ಪರ ಡಿಕ್ಕಿಯಾಗಿದೆ.
ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದರು. ರಾಭಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿವಿಲ್ ಡ್ರಸ್ನಲ್ಲಿದ್ದ ರಾಭಾ ಆ ಸಮಯದಲ್ಲಿ ಒಬ್ಬರೇ ಎಲ್ಲಿಗೆ ಹೋಗುತ್ತಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಜಿಲ್ಲಾ ಎಸ್ಪಿ ಹೇಳಿದ್ದಾರೆ.
ಕಳೆದ ವರ್ಷ ಜೂನ್ನಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಅವರ ಮಾಜಿ ಗೆಳೆಯನನ್ನು ಬಂಧಿಸಲಾಗಿತ್ತು ಮತ್ತು ಮಜುಲಿ ಜಿಲ್ಲೆಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಬಳಿಕ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ಮತ್ತೆ ಕೆಲಸಕ್ಕೆ ಮರಳಿದ್ದರು.
ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮಗಳನ್ನು ಪೂರ್ವಯೋಜಿತ ಸಂಚು ನಡೆಸಿ ಕೊಂದು ಹಾಕಲಾಗಿದೆ. ಆಕೆ ಮತ್ತೊಬ್ಬ ಸಬ್ ಇನ್ಸ್ಪೆಕ್ಟರ್ ಜೊತೆ ರಾತ್ರಿ ಸಂಚರಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿರುವುದಾಗಿ ತಾಯಿ ತಿಳಿಸಿದ್ದಾರೆ. ನಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










