ಲೈಂಗಿಕ ಕಿರುಕುಳ ಪ್ರಕರಣ – ನೋಡಲ್ ಅಧಿಕಾರಿಯನ್ನು ವಶಕ್ಕೆ ಪಡೆದ ಪೊಲೀಸರು…

98
firstsuddi

ಮಂಗಳೂರು : ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ದ.ಕ. ಜಿಲ್ಲೆಯ ಕುಷ್ಠರೋಗ ನಿವಾರಣಾಧಿಕಾರಿ ಡಾ.ರತ್ನಾಕರ್ ನನ್ನು ಮಹಿಳಾ ಪೊಲೀಸರು ನಿನ್ನೆ ವಶಕ್ಕೆ ಪಡೆದಿರುವುದಾಗಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿ, ಕುಷ್ಠರೋಗ ನಿವಾರಣಾ ವಿಭಾಗದ ಅಧಿಕಾರಿ ಆಗಿರುವ ಡಾ. ರತ್ನಾಕರ್ ಕೆಲವು ತಿಂಗಳ ಹಿಂದೆ ಸರ್ಕಾರಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಲಾಗಿದೆ. ಈ ಮಧ್ಯೆ ಸಂತ್ರಸ್ಥೆ ಯುವತಿಯ ಪರವಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಮಹಿಳೆಯೊಬ್ಬರು ನಿನ್ನೆ ನೀಡಿದ ದೂರನ್ನು ದಾಖಲಿಸಿಕೊಂಡ ಮಹಿಳಾ ಪೊಲೀಸರು ಆರೋಪಿ ಅಧಿಕಾರಿ ಡಾ.ರತ್ನಾಕರ್ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಡಾ.ರತ್ನಾಕರ್ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ವಿಷಯವು ಮಾಧ್ಯಮಗಳಲ್ಲಿ ಬಹಿರಂಗಗೊಂಡರೂ ಕೂಡ ಭವಿಷ್ಯದ ಹಿತದೃಷ್ಟಿಯಿಂದ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆಯರು ದೂರು ನೀಡಲು ಹಿಂದೇಟು ಹಾಕಿದ್ದಾರೆ. ಆದರೆ ಮುಂದಿನ ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದಿದ್ದಾರೆ. ವಿಚಾರಣೆಯ ಬಳಿಕ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ.