ಲೋಕಸಭಾ ಚುನಾವಣೆಗೆ 25 ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್.

53
firstsuddi

ನವದೆಹಲಿ: ಮುಂಬರಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಲೋಕಸಭೆ ಚುನಾವಣೆಯ ರಣಕಹಳೆ ಮೊಳಗುತ್ತಿದ್ದಂತೆಯೇ ಎಲ್ಲ ಪಕ್ಷಗಳು ಜನತೆಗೆ ಭರವಸೆಗಳ ಸರಮಾಲೆಯನ್ನೇ ನೀಡಲಾರಂಭಿಸಿವೆ. ಕಾಂಗ್ರೆಸ್ ಕೂಡ ಚುನಾವಣಾ ರ್ಯಾಲಿಗಳಲ್ಲಿ ಜನರಿಗೆ ಹಲವು ಭರವಸೆಗಳನ್ನು ನೀಡಿದೆ. ಈ ನಡುವೆ ಇಂದು ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ಪಕ್ಷವು ಪಂಚ ನ್ಯಾಯ ಮತ್ತು 25 ಭರವಸೆಗಳನ್ನು ನೀಡಿದೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ಶ್ರಮಿಕ್ ನ್ಯಾಯ’ಮತ್ತು ‘ಹಿಸ್ಸೆದಾರಿ ನ್ಯಾಯ’ಹಾಗೂ ಖಾತರಿಗಳು ಸೇರಿದಂತೆ ಪಂಚ ನ್ಯಾಯ ಅಥವಾ ನ್ಯಾಯದ ಐದು ಸ್ತಂಭಗಳಿಗೆ ಒತ್ತು ನೀಡಿದೆ.

ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಜಾತಿ ಆಧಾರಿತ ಜನಗಣತಿ ನಡೆಸುವುದಾಗಿ ಭರವಸೆ ನೀಡಿದೆ. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ವರ್ಷ ಲಕ್ಷ ರೂ.ಗಳ ನೆರವು ನೀಡುವುದಾಗಿ ತಿಳಿಸಿದ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು.

ಯುವ ನ್ಯಾಯ ಅಡಿಯಲ್ಲಿ ಪಕ್ಷವು ಮಾತನಾಡಿರುವ ಐದು ಖಾತರಿಗಳಲ್ಲಿ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ಭರವಸೆ ಮತ್ತು ಒಂದು ವರ್ಷದವರೆಗೆ ಅಪ್ರೆಂಟಿಸ್ಶಿಪ್ ಕಾರ್ಯಕ್ರಮದಡಿಯಲ್ಲಿ ಯುವಕರಿಗೆ 1 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ.

ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ವರ್ಷ ಎಂಎಸ್ಪಿ ಘೋಷಿಸುವ ಕಾನೂನು ಖಾತರಿ ನೀಡುವುದಾಗಿ ಘೋಷಿಸಿದೆ.
ಕಾರ್ಮಿಕ ನ್ಯಾಯ ಅಡಿಯಲ್ಲಿ, ಕಾರ್ಮಿಕರಿಗೆ ಆರೋಗ್ಯದ ಹಕ್ಕನ್ನು ಒದಗಿಸುವುದು, ದಿನಕ್ಕೆ ಕನಿಷ್ಠ 400 ರೂ. ವೇತನ ಮತ್ತು ನಗರ ಉದ್ಯೋಗ ಖಾತರಿಯನ್ನು ಖಚಿತಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಪ್ರಣಾಳಿಕೆಯಲ್ಲಿ 25 ಬಗೆಯ ಭರವಸೆಗಳನ್ನು ನೀಡಲಾಗಿದೆ. ನಮ್ಮ ಪ್ರಣಾಳಿಕೆ ಬಡವರಿಗೆ ಮೀಸಲಾಗಿದೆ ಎಂದು ಖರ್ಗೆ ಹೇಳಿದರು.

ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು
– ದೇಶಾದ್ಯಂತ ಜಾತಿ ಗಣತಿ, ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆ (ರೈಲು ಮತ್ತು ರಸ್ತೆ) ಯಲ್ಲಿ ರಿಯಾಯಿತಿ ದರದಲ್ಲಿ ಪ್ರಯಾಣ ಮರುಜಾರಿ
– ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್‌ ಕಾಲೇಜು/ಆಸ್ಪತ್ರೆ
– ಆಶಾ,ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಕೇಂದ್ರದ ಪಾಲು ದ್ವಿಗುಣ
– 2500ಕ್ಕಿಂತ ಜನಸಂಖ್ಯೆ ಜಾಸ್ತಿ ಇರುವ ಹಳ್ಳಿಗಳಲ್ಲಿ ಎರಡನೇ ಆಶಾ ಕಾರ್ಯಕರ್ತೆ ನೇಮಕ
– 12ನೇ ತರಗತಿಯವರೆಗೆ ಮಧ್ಯಾಹ್ನದ ಬಿಸಿಯೂಟ

– ರಾಜ್ಯಗಳ ಜೊತೆ ಚರ್ಚಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ
– ಪಬ್ಲಿಕ್ ಶಾಲೆಗಳಲ್ಲಿ ಸ್ಪೆಷಲ್‌ ಫೀಸ್ ಗಳು ರದ್ದು
– ಶಿಕ್ಷಕರನ್ನು ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಲ್ಲ
– ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳ ಸಂಖ್ಯೆ ರಾಜ್ಯಗಳ ಜೊತೆ ಚರ್ಚಿಸಿ ಹೆಚ್ಚಳ

– ಪ್ರತಿ ತಾಲೂಕಿನಲ್ಲಿ ಸರ್ಕಾರಿ ಕಮ್ಯುನಿಟಿ ಕಾಲೇಜು (ಹಾಸ್ಪಿಟಾಲಿಟಿ, ಪ್ರವಾಸೋದ್ಯಮ, ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಇತ್ಯಾದಿ ಕಲಿಕೆ)
– 9 ರಿಂದ 12ನೇ ತರಗತಿಯ ಮಕ್ಕಳಿಗೆ ಮೊಬೈಲ್ ಫೋನ್ (ಶಾಲೆ, ಕಾಲೇಜು ಕ್ಯಾಂಪಸ್‌ನಲ್ಲಿ ಉಚಿತ ಅನ್ ಲಿಮಿಟೆಡ್ ಇಂಟರ್‌ನೆಟ್)
– 21 ವರ್ಷದೊಳಗಿನ ಕ್ರೀಡಾ ಪ್ರತಿಭೆಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.ಗಳ ಕ್ರೀಡಾ ಸ್ಕಾಲರ್ ಶಿಪ್

– ಮಹಾಲಕ್ಷ್ಮಿ ಯೋಜನೆಯಡಿ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ.
– ಕುಟುಂಬದ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
– ಮಹಿಳೆಯರು ಇಲ್ಲದಿದ್ದರೆ ಕುಟುಂಬದ ಅತಿ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ
– ವಿವಿಧ ಹಂತಗಳಲ್ಲಿ ಮಹಾಲಕ್ಷ್ಮಿ ಯೋಜನೆ ಜಾರಿ. ಬಡತನ ನಿರ್ಮೂಲನೆಗೆ ಸಹಾಯವಾಗಿದೆಯಾ ಎಂದು ಕಾಲಕಾಲಕ್ಕೆ ಯೋಜನೆಯ ಅವಲೋಕನ

– ಮಹಿಳಾ ಮೀಸಲಾತಿ 2025ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲೇ ಜಾರಿ
– 2025ರಿಂದ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಜಾರಿ
– ಒಂದು ದೇಶ, ಒಂದು ಚುನಾವಣೆ ತಿರಸ್ಕಾರ

– ಇವಿಎಂ ಮೂಲಕವೇ ಮತದಾನ ನಡೆಯಬೇಕು. ಆದರೆ ಬ್ಯಾಲಟ್ ಪೇಪರ್ ನಲ್ಲಿ ಪಾರದರ್ಶಕತೆ. ಮತದಾರನೇ ತನ್ನ ಕೈಯಾರೆ ಇವಿಎಂ ಮತದಾನದ ಬಳಿಕ ಯಂತ್ರವು ನೀಡುವ ವೋಟರ್ ಸ್ಲಿಪ್ ವಿವಿಪ್ಯಾಟ್ ಯೂನಿಟ್ ಗೆ ಹಾಕಲು ವ್ಯವಸ್ಥೆ. ಎಲೆಕ್ಟ್ರಾನಿಕ್ ವೋಟ್ ಮತ್ತು ವಿವಿಪ್ಯಾಟ್ ಸ್ಲಿಪ್ ಟ್ಯಾಲಿ ಆಗಲೇಬೇಕು.

– ಶಾಸಕ ಅಥವಾ ಸಂಸದ ಪಕ್ಷ ಬದಲಾಯಿಸಿದರೆ (ಗೆದ್ದ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋದರೆ) ಆಟೋಮ್ಯಾಟಿಕ್ ಆಗಿ ಶಾಸಕ ಅಥವಾ ಸಂಸದನ ಸ್ಥಾನ ಅನರ್ಹತೆ. ಇದಕ್ಕಾಗಿ 10ನೇ ಶೆಡ್ಯೂಲ್‌ಗೆ ತಿದ್ದುಪಡಿ.