ಲೋನ್ ಕಟ್ಟಿಲ್ಲವೆಂದು ಟಾರ್ಚರ್- ವಿದ್ಯಾರ್ಥಿ ನೇಣಿಗೆ ಶರಣು…

66
firstsuddi

ಬೆಂಗಳೂರು: ಚೀನಾ ಆ್ಯಪ್ ಮೂಲಕ ಲೋನ್ ಪಡೆದಿದ್ದ ವಿದ್ಯಾರ್ಥಿ ನೇಣಿಗೆ ಶರಣಾಗಿರುವಂತಹ ಘಟನೆ ನಗರದಲ್ಲಿ ನಡೆದಿದೆ.

ತೇಜಸ್ (22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಯಲಹಂಕದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಆರನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದು, ಕಾಲೇಜಿಗೆ ಟಾಪರ್ ಆಗಿದ್ದ.

ತೇಜಸ್ ತನ್ನ ಸ್ನೇಹಿತ ಮಹೇಶ್ ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದನು. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ನೀಡಿದ್ದ ಲೋನ್ ಕಂಪನಿಗಳು ವಿಪರೀತ ಟಾರ್ಚರ್ ಕೊಡುತ್ತಿದ್ದವು. ಈ ಟಾರ್ಚರ್ ತಾಳಲಾರದೆ ನಿನ್ನೆ ಡೆತ್ ನೋಟ್ ಬರೆದಿಟ್ಟು ತೇಜಸ್ ತನ್ನ ತಾಯಿಯ ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಮ್ಮ ಅಪ್ಪ ನನ್ನನ್ನು ಕ್ಷಮಿಸಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ. ನಾನು ಮಾಡಿರುವ ಸಾಲ ತೀರಿಸಲು ಆಗುವುದಿಲ್ಲ ಅದಕ್ಕಾಗಿ ಇದು ನನ್ನ ಕೊನೆಯ ತೀರ್ಮಾನ. ಥ್ಯಾಂಕ್ಸ್ ಗುಡ್ ಬಾಯ್ ಎಂದು ತೇಜಸ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಯುವಕನ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿ ಹೆಚ್ಎಂಟಿ ಕ್ವಾಟ್ರಸ್ ನಲ್ಲಿರುವ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ತೇಜಸ್ ಪೋಷಕರು ದೂರು ನೀಡಿದ್ದಾರೆ.