ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದಬಾಬು ಪೂಜಾರಿಯಿಂದ 5 ಕೋಟಿ ಹಣ ಪಡೆದು ವಂಚನೆ ಮಾಡಿದ್ದ ಚೈತ್ರಾ ಗ್ಯಾಂಗ್ ಪ್ರಕರಣ ಸಂಬಂಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 9 ಆರೋಪಿಗಳ ವಿರುದ್ಧ ಸಿಸಿಬಿ ಅಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಡಿಜಿಟಲ್ ಸಾಕ್ಷಿಗಳು, ಬ್ಯಾಂಕ್ ಸ್ಟೇಟ್ ಮೆಂಟ್ಗಳು, ಸಾಂದರ್ಭಿಕ ಸಾಕ್ಷಿಗಳು, ಸ್ವಾಮಿಜಿ ಕಾರು ಚಾಲಕ ಹಣ ಇಟ್ಟು ಹೋಗಿದ್ದ ಬಗ್ಗೆ ಮೈಸೂರು ಮೂಲದ ವ್ಯಕ್ತಿಯು ನೀಡಿದ ಹೇಳಿಕೆ ಸೇರಿದಂತೆ ಸ್ಪಾಟ್ ಮಹಜರ್ ನಡೆಸಿ ಹಣ ಸೀಜ್ ಮಾಡಿದ ಸ್ಥಳಗಳ ಬಗ್ಗೆ ಸಿಸಿಬಿ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಸಿಸಿಬಿ ತಂಡ ಚೈತ್ರಾ ವಂಚನೆ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದು ಎಂಎಲ್ಎ ಟಿಕೆಟ್ ಡೀಲ್ ಸಂಬಂಧ 68 ಸಾಕ್ಷ್ಯಗಳನ್ನ ಕಲೆ ಹಾಕಿ, 75 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿ ಸುಮಾರು 800 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಚೈತ್ರಾ ವಂಚನೆ ಪ್ರಕರಣದಲ್ಲಿ ಬರೋಬ್ಬರಿ 4 ಕೋಟಿ 11 ಲಕ್ಷ ರೂಪಾಯಿ ರಿಕವರಿ ಮಾಡಲಾಗಿದೆ. ಬೃಹತ್ ಮೊತ್ತದ ಹಣ ರಿಕವರಿ ಹಿನ್ನಲೆ ಚೈತ್ರಾ ಗ್ಯಾಂಗ್ಗೆ ಸಂಕಷ್ಟ ಎದುರಾಗಿದೆ.










