ವಂದೇ ಭಾರತ್ ರೈಲಿನಲ್ಲಿ ನೀಡಲಾದ ಚಪಾತಿ ಊಟದಲ್ಲಿ ಪತ್ತೆಯಾದ ಜಿರಳೆ- ಕ್ಷಮೆ ಕೋರಿದ ಐಆರ್‌ಸಿಟಿಸಿ.

57
firstsuddi

ಭೋಪಾಲ್: ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ನೀಡಲಾದ ಚಪಾತಿ ಊಟದಲ್ಲಿ ಜಿರಳೆ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರಾಜಧಾನಿ ಭೋಪಾಲ್‌ನಿಂದ ಗ್ವಾಲಿಯರ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಐಆರ್‌ಸಿಟಿಸಿ ಕ್ಯಾಟರಿಂಗ್ ಸಿಬ್ಬಂದಿ ಬಡಿಸಿದ ಚಪಾತಿ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಬ್ಲಾಗರ್ ಸುಬೋಧ್ ಪಹಲಾಜನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತ ಫೋಟೋಗಳನ್ನು ಹಂಚಿಕೊಂಡಿದ್ದು, ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಟ್ವೀಟ್ ಮೂಲಕ ಹಂಚಿಕೊಳ್ಳಲಾದ ಫೋಟೋಗಳಲ್ಲಿ ಚಪಾತಿಗೆ ಸಣ್ಣ ಜಿರಳೆಯೊಂದು ಅಂಟಿಕೊಂಡಿರುವುದನ್ನು ತೋರಿಸಿದೆ. ಇದನ್ನು ಐಆರ್‌ಸಿಟಿಸಿ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದು, ವಂದೇ ಭಾರತ್ ರೈಲಿನಲ್ಲಿ ನನಗೆ ನೀಡಲಾದ ಆಹಾರದಲ್ಲಿ ಜಿರಳೆ ಕಂಡುಬಂದಿದೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿ ಕ್ಷಮೆ ಕೋರಿದ ಐಆರ್‌ಸಿಟಿಸಿ, ಪ್ರಯಾಣಿಕನ ಸಮಸ್ಯೆಯನ್ನು ಬಗೆಹರಿಸಿ ಪರ್ಯಾಯ ಆಹಾರ ವ್ಯವಸ್ಥೆ ಮಾಡಿ ಕೊಟ್ಟಿದೆ. ಅಲ್ಲದೇ ನಿಮಗೆ ಸಂಭವಿಸಿದ ಅಹಿತಕರ ಘಟನೆಗಾಗಿ ವಿಷಾದಿಸುತ್ತೇವೆ. ಮುಂದೆ ಅಂತಹ ಯಾವುದೇ ಘಟನೆಗಳು ನಡೆಯದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.