ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇವಾಲಯಕ್ಕೆ ಬರುವ ಮಹಿಳೆಯರಿಗೆ ಅರಿಶಿಣ-ಕುಂಕುಮ, ಹಸಿರು ಬಳೆಗಳನ್ನು ಗೌರವಸೂಚಕವಾಗಿ ನೀಡಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಇದೇ ತಿಂಗಳ 25ರಂದು ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಇದ್ದು, ಅಂದು ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಲು ಮಹಿಳೆಯರು ಆಗಮಿಸುತ್ತಾರೆ. ಈ ವೇಳೆ ದೇವಾಲಯಗಳು ತಮ್ಮ ನಿಧಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿಣ-ಕುಂಕುಮ, ಹಸಿರು ಬಳೆಗಳನ್ನು ತಂದು ದೇವರ ಮುಂದೆ ಇಟ್ಟು ಪೂಜಿಸಿ ಗೌರವ ಪೂರ್ವಕವಾಗಿ ಮಹಿಳೆಯರಿಗೆ ನೀಡಬೇಕು. ಪ್ರಸಾದ ರೂಪವಾದ ಅರಿಶಿಣ-ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಮುದ್ರಿಸಿ, ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ವಿತರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.










