‘ವರಾಹರೂಪಂ’ ವಿವಾದ – ಕೇರಳ ಹೈಕೋರ್ಟ್‍ನಲ್ಲಿ ಹೊಂಬಾಳೆ ಫಿಲ್ಮ್ಸ್​ಗೆ ಹಿನ್ನಡೆ…

52
firstsuddi

ತಿರುವನಂತಪುರಂ : ಕಾಂತಾರ ಸಿನಿಮಾದ ʼವರಾಹರೂಪಂʼ ಹಾಡಿಗೆ ನೀಡಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ಹೊಂಬಾಳೆ ಫಿಲ್ಮ್ಸ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್​ಗೆ ಹಿನ್ನಡೆ ಆಗಿದೆ.

ಕೇರಳ ಹೈಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಎಸ್. ದಿಯಾಸ್ ಅವರು ಅರ್ಜಿಯನ್ನು ವಜಾ ಮಾಡಿದ್ದಾರೆ.
ಅಧೀನ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ನಾವು ಮಧ್ಯ ಪ್ರವೇಶಿಸಬಾರದು. ಹಾಗೆ ಮಾಡಿದರೆ ಅಧೀನ ನ್ಯಾಯಾಲಯಗಳು ಬಲಗುಂದಿದಂತೆ ಆಗುತ್ತವೆ.

ಎಲ್ಲಾ ಮೇಲ್ಮನವಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಕೋರ್ಟ್ ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾ ಮಾಡಿದೆ. ಅಲ್ಲದೆ, ಪರ್ಯಾಯ ಕಾನೂನು ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದೆ.

ಏನಿದು ಪ್ರಕರಣ?
ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ ಕಾಂತಾರ ಸಿನಿಮದ ʼವರಾಹರೂಪಂʼ ಕೃತಿಚೌರ್ಯದ ಆರೋಪ ಮಾಡಿ ಕೇಸ್ ದಾಖಲಿಸಿತ್ತು. ಅರ್ಜಿಯನ್ನು ಮಾನ್ಯ ಮಾಡಿದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯ ಮತ್ತು ಕೋಝಿಕ್ಕೋಡ್ ಪ್ರಧಾನ ಜಿಲ್ಲಾ ನ್ಯಾಯಾಲಯ ಹಾಡನ್ನು ಒಪ್ಪಿಗೆ ಇಲ್ಲದೆ ಪ್ರಸಾರ ಮಾಡಬಾರದು ಎಂದು ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದವು. ಈ ಆದೇಶವನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್ ಮೊರೆ ಹೋಗಿತ್ತು.

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರ ವಿಶ್ವದಾದ್ಯಂತ ಈವರೆಗೆ ಒಟ್ಟು 400 ಕೋಟಿ ರೂ. ಸಂಗ್ರಹಿಸುವ ಮೂಲಕ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ 2ನೇ ಚಿತ್ರ ಎನ್ನುವ ಹೆಗ್ಗಳಿಕೆ ಪಡೆದಿದೆ. ಕೆಜಿಎಫ್ ಕರ್ನಾಟಕದಲ್ಲಿ ದಾಖಲೆ ಮೊತ್ತದ ಹಣ ಗಳಿಸಿ ನ. 1 ಸ್ಥಾನದಲ್ಲಿದ್ದರೆ, ಕಾಂತಾರ 168.50 ಕೋಟಿ ಕಲೆಕ್ಷನ್ ಮಾಡಿ 2ನೇ ಸ್ಥಾನದಲ್ಲಿದೆ. ನಟನೆ ಜೊತೆಗೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವ ರಿಷಬ್ ಶೆಟ್ಟಿ, ಇದೀಗ ಪ್ಯಾನ್ ಇಂಡಿಯಾ ಸೆಲೆಬ್ರಿಟಿ ಆಗಿ ಹೊರಹೊಮ್ಮಿದ್ದಾರೆ.