ಚೆನ್ನೈ : ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ. ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಚೆನ್ನೈ ಮಹಾನಗರ ಸಂಪೂರ್ಣ ದ್ವೀಪದಂತಾಗಿದ್ದು, 500ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತವಾಗಿದೆ. ರಸ್ತೆ, ಮನೆ, ಅಂಗಡಿ, ಕಾರ್ಖಾನೆಗಳಿಗೆ ನೀರು ನುಗ್ಗಿದ್ದು, ಜನ ನೀರನ್ನು ಹೊರ ಹಾಕಲು ಪರದಾಡುತ್ತಿದ್ದಾರೆ. ನಿನ್ನೆ ಸಂಜೆಯಿಂದ ಏರ್ಪೋರ್ಟ್ ನಲ್ಲಿ ಕಾರ್ಯಾರಂಭಗೊಳಿಸಲಾಗಿದೆ.
ಮಳೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಟಿಪಿ ಚಾತ್ರಂ ಠಾಣೆ ಇನ್ಸ್ಪೆಕ್ಟರ್ ರಾಜೇಶ್ವರಿ ಭುಜದ ಮೇಲೆ ಹೊತ್ತುಕೊಂಡು ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದರು. ರಾಜೇಶ್ವರಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಳೆಯಿಂದಾಗಿ 100 ಬೆಡ್ ಗಳು ಜಲಾವೃತವಾಗಿದೆ. ಆಸ್ಪತ್ರೆಯೊಳಗೆ ಮೊಣಕಾಲುದ್ದ ನೀರು ನಿಂತ ಪರಿಣಾಮ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಯಿತು. ಮಾಮಲ್ಲಪುರಂ ಬೀಚ್ ಬಳಿ ಇರುವ ದೇವಾಲಯ ಕೂಡ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಪೆಟ್ರೋಲ್ ಬಂಕ್ ಗಳಿಗೂ ಮಳೆ ನೀರು ನುಗ್ಗಿದೆ. ಒಟ್ಟಾರೆ 2015 ರ ಬಳಿಕ ಚೆನ್ನೈನಲ್ಲಿ ಸುರಿದ ಮಹಾ ಮಳೆಮಳೆಗೆ ಜನರು ಹೈರಾಣಾಗಿದ್ದು, ಇನ್ನಷ್ಟು ದಿನ ತಮಿಳುನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.










