ಚಂಡೀಗಢ : ಮುಂದಿನ ವರ್ಷದಿಂದ ವಾಯುಪಡೆಗೆ ಮಹಿಳಾ ಅಗ್ನಿವೀರರನ್ನು ನೇಮಿಸಲಾಗುತ್ತದೆ ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಹೇಳಿದ್ದಾರೆ.
ಭಾರತೀಯ ವಾಯುಪಡೆಯ 90ನೇ ವಾರ್ಷಿಕ ದಿನಾಚರಣೆ ವೇಳೆ ಮಾತನಾಡಿದ ಅವರು, ಈ ಐತಿಹಾಸಿಕ ಸಂದರ್ಭದಲ್ಲಿ, ಐಎಎಫ್ ನ ಅಧಿಕಾರಿಗಳಿಗಾಗಿ ವೆಪನ್ ಸಿಸ್ಟಮ್ ಬ್ರ್ಯಾಂಚ್ ಸೃಷ್ಟಿಸುವುದಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ಪ್ರಕಟಿಸಲು ಸಂತಸವಾಗುತ್ತಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಹೊಸ ಕಾರ್ಯಾಚರಣಾ ಶಾಖೆ ಸ್ಥಾಪನೆಯಾಗುತ್ತಿದೆ. ಇದು ಮೂಲಭೂತವಾಗಿ ಎಲ್ಲಾ ರೀತಿಯ ಇತ್ತೀಚಿನ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿರುತ್ತದೆ. ಇದರಿಂದಾಗಿ ಸರ್ಕಾರಕ್ಕೆ 3,400 ಕೋಟಿಗೂ ಅಧಿಕ ಹಾರಾಟ ತರಬೇತಿಯ ವೆಚ್ಚ ಉಳಿತಾಯವಾಗಲಿದೆ ಎಂದು ಅವರು ತಿಳಿಸಿದರು.
ಐಎಎಫ್ ಮೂಲಕ ವೃತ್ತಿಜೀವನ ಪ್ರಾರಂಭಿಸಲು ಪ್ರತಿಯೊಬ್ಬ ಅಗ್ನಿವೀರ್ ಉತ್ತಮ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕಾರ್ಯಾಚರಣೆಯ ತರಬೇತಿ ವಿಧಾನವನ್ನು ಬದಲಾಯಿಸಿದ್ದೇವೆ. ಈ ವರ್ಷದ ಡಿಸೆಂಬರ್ ನಲ್ಲಿ ಆರಂಭಿಕ ತರಬೇತಿಗಾಗಿ 3,000 ಅಗ್ನಿವೀರರನ್ನು ವಾಯುಪಡೆಗೆ ಸೇರಿಸಿಕೊಳ್ಳುತ್ತೇವೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದಾರೆ.
ಭಾರತೀಯ ವಾಯುಪಡೆಯು ತನ್ನ 90ನೇ ವರ್ಷಾಚರಣೆಯನ್ನು ಇದೇ ಮೊದಲ ಬಾರಿಗೆ ದಿಲ್ಲಿಯಿಂದ ಹೊರಗೆ ಆಚರಿಸುತ್ತಿದೆ. ಈ ಬಾರಿ ಚಂಡಿಗಡದಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದು, ಸುಖಾನಾ ಸರೋವರದ ಮೇಲೆ ಸುಮಾರು 80 ಯುದ್ಧ ವಿಮಾನಗಳು ಸುದೀರ್ಘ ಸಮಯ ಪ್ರದರ್ಶನ ನೀಡಿವೆ.










