ವಾಹನ ಸವಾರರಿಗೆ ಗುಡ್‍ನ್ಯೂಸ್ HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ!.

82

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆಯ ಎಲ್ಲ ವಾಹನಗಳಿಗೂ HSRP ನಂಬರ್ ಪ್ಲೇಟ್ (High Security Registration Number Plate) ಕಡ್ಡಾಯ ಮಾಡಲಾಗಿದ್ದು, ಇದೀಗ ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ಗಡುವನ್ನು ನೀಡಲಾಗಿದೆ. HSRP ನಂಬರ್ ಪ್ಲೇಟ್ ಅಳವಡಿಕೆಗೆ ನವೆಂಬರ್ 20 ರವರೆಗೆ ಅವಧಿ ವಿಸ್ತರಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಇನ್ನೂ ಅರ್ಧದಷ್ಟು ವಾಹನ ಸವಾರರು HSRP ನಂಬರ್ ಪ್ಲೆಟ್ ಅಳವಡಿಕೆ ಮಾಡಿಸಿಕೊಳ್ಳುವುದು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ನೀಡಬೇಕೆಂದು ಹಿರಿಯ ವಕೀಲ ದೇವದತ್ ಕಾಮತ್ ಅವರು ವಾಹನ ಮಾಲೀಕರ ಪರವಾಗಿ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ. ಈ ಮನವಿ ಪರಿಗಣಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿಕೆ ಮಾಡಿದೆ. ನವೆಂಬರ್ 20ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದರಿಂದ, HSRP ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವೂ ವಿಸ್ತರಣೆಗೊಂಡಿದೆ.
ರಾಜ್ಯ ಸರ್ಕಾರದಿಂದ ಈಗಾಗಲೇ ಎಲ್ಲ ಮೋಟಾರು ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High Security Registration Plate- HSRP)  ಅಳವಡಿಕೆ ಮಾಡಿಸಿಕೊಳ್ಳಲು ನಾಲ್ಕು ಬಾರಿ ಗಡುವು ನೀಡಿತ್ತು. ಕೊನೆಯ ಬಾರಿ ಸೆಪ್ಟೆಂಬರ್ 14ರಂದು ಈ ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನವಾಗಿ ಗಡುವು ನೀಡಿತ್ತು. ಆದರೆ, ಈ ಬಗ್ಗೆ ಸೆಪ್ಟೆಂಬರ್ 18ರಂದು ವಿಚಾರಣೆ ಇದ್ದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಯಾವುದೇ ದಂಡವನ್ನು ವಿಧಿಸಿರಲಿಲ್ಲ. ಇಂದು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ವಕೀಲರ ಮನವಿ ಮೇರೆಗೆ HSRP ನಂಬರ್ ಪ್ಲೇಟ್ ಅಳವಡಿಕೆ ಅವಧಿಯನ್ನು 2024ರ ನವೆಂಬರ್ 20ರ ವರೆಗೆ ಅವಧಿ ವಿಸ್ತಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಈವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಆತಂಕದಲ್ಲಿದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದೆ.