ವಿಚ್ಛೇದನ ನೀಡದಿದ್ದರೆ ಅಶ್ಲೀಲ ವೀಡಿಯೋ ವೈರಲ್ ಮಾಡುತ್ತೇನೆ: ಪತ್ನಿಗೇ ಬ್ಲಾಕ್ ಮೇಲ್ ಮಾಡಿದ ಪತಿಯ ಬಂಧನ…

58
firstsuddi

ಬೆಳಗಾವಿ: ವಿಚ್ಛೇದನ ನೀಡದಿದ್ದರೆ ಅಶ್ಲೀಲ ವೀಡಿಯೋ, ಫೋಟೋ ವೈರಲ್ ಮಾಡುತ್ತೇನೆ ಎಂದು ತನ್ನ ಪತ್ನಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ನಡೆದಿದೆ.

ಬೆಳಗಾವಿ ನಗರದ ನಿವಾಸಿ ಕಿರಣ್ ಪಾಟೀಲ್ ತನ್ನ ಪತ್ನಿಗೆ ವಿಚ್ಛೇದನ ನೀಡಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದನು. ಇದಕ್ಕಾಗಿಯೇ ವಿಚ್ಛೇದನ ನೀಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೆ, ಖಾಸಗಿ ಕ್ಷಣದ ವೀಡಿಯೋ, ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು.

ಗಂಡನ ಈ ವಂಚನೆ ಬಗ್ಗೆ ಆಘಾತಕ್ಕೆ ಒಳಗಾಗಿದ್ದ ಪತ್ನಿ, ಸಾಕಷ್ಟು ಬಾರಿ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಪತಿ ಕಿರಣ್, ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದನು. ಅಷ್ಟಕ್ಕೂ ಸುಮ್ಮನಾಗದ ಆತ, ಪತ್ನಿಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುವುದನ್ನು ಮುಂದುವರಿಸಿದ್ದನು.

ಇದರಿಂದ ದಿಕ್ಕೆ ತೋಚದಂತಾದಾಗ ಮಹಿಳೆ ಪತಿ ವಿರುದ್ಧ ಬೆಳಗಾವಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಿರಣ್​ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆತನ ಮೊಬೈಲ್​ನಲ್ಲಿ ಪತ್ನಿಯ ಅಶ್ಲೀಲ ವೀಡಿಯೋ, ಫೋಟೋ ಇರುವುದು ಬೆಳಕಿಗೆ ಬಂದಿದೆ.

ಆರೋಪ ಸಾಬೀತಾಗುತ್ತಿದ್ದಂತೆ ಪೊಲೀಸರು ಬಂಧಿಸಲು ಮುಂದಾದಾಗ ಕಿರಣ್ ತಪ್ಪಿಸಿಕೊಂಡು ಓಡಿ ಹೋಗಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ್ದಾನೆ. ಆದರೆ ಪೊಲೀಸರು ಕಿರಣ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.