ಬೆಂಗಳೂರು : ನನಗೆ ಶಿಕಾರಿಪುರದ ಜನ ಚುನಾವಣೆ ನಿಲ್ಲಲು ಒತ್ತಾಯ ಮಾಡಿದರು. ಆದರೆ ನಿಲ್ಲೋದಿಲ್ಲ, ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದೆ. ಆದರೆ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿ ಅಂತಿಮ ತೀರ್ಮಾನವನ್ನು ಮಾಡುತ್ತಾರೆ. ಪಕ್ಷದ ತೀರ್ಮಾನವೇ ಅಂತಿಮವಾಗುತ್ತದೆ. ನಿನ್ನೆ ಹೇಳಿದ್ದು, ನನ್ನ ಸಲಹೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಎಲ್ಲೇ ನಿಂತರೂ ಗೆಲ್ಲುವ ಒಂದು ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಹಳೆ ಮೈಸೂರು, ಶಿಕಾರಿಪುರ ಎಲ್ಲೇ ನಿಂತರೂ ಅವರು ಗೆಲ್ಲುತ್ತಾರೆ. ಆದರೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.
ಕುಟುಂಬ ರಾಜಕೀಯ ಆಗೋದಿಲ್ಲವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಹೇಳಿದ್ದಾರೆ. ಹಾಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ನನ್ನ ಮಗ ಸ್ಪರ್ಧಿಸುತ್ತಾನೆ. ಈ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ನನಗೆ ಪಕ್ಷದಲ್ಲಿ ಸಾಕಷ್ಟು ಅವಕಾಶ ಸಿಕ್ಕಿದೆ. ರಾಷ್ಟ್ರಮಟ್ಟದಲ್ಲಿ ಬೆಳೆಸಿದ್ದಾರೆ ಎಂದು ಹೇಳಿದರು.
ಪಕ್ಷದಲ್ಲಿ ನನ್ನ ಮೂಲೆಗುಂಪು ಮಾಡಲಾಯ್ತು ಎನ್ನೋದು ಸತ್ಯಕ್ಕೆ ದೂರವಾದ ಮಾತು. ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಪುರಸಭೆ ಸದಸ್ಯನಾಗಿದ್ದವನನ್ನು ನಾಲ್ಕು ಬಾರಿ ಸಿಎಂ ಮಾಡಿದೆ. ನಾನು ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುತ್ತೇನೆ. 140 ಕ್ಕೂ ಹೆಚ್ಚು ಸೀಟು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
 
            
 
		








