ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಂಸ್ಕೃತಿ, ಸಂಪ್ರದಾಯ ಕಲಿಸಿ : ಬಿ.ಆರ್.ಜಗದೀಶ್.

108
firstsuddi

ಚಿಕ್ಕಮಗಳೂರು : ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರವನ್ನೂ ಕಲಿಸಬೇಕು ಎಂದು ನ್ಯಾಯವಾದಿ ಬಿ.ಆರ್.ಜಗದೀಶ್ ಸಲಹೆ ಮಾಡಿದರು.

ನಗರದ ಕಣಿವೆ ಸಮೀಪದ ಶ್ರೀ ಗುರು ಸಿದ್ದರಾಮೇಶ್ವರ ವಿದ್ಯಾ ಸಂಸ್ಥೆಯಲ್ಲಿ ಇಂದು ನಡೆದ ಶ್ರೀ ಶಾರದಾ ಪೂಜೆ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಇತ್ತೀಚಿನ ವರ್ಷಗಳಲ್ಲಿ ಸಾಕ್ಷರತೆಯಲ್ಲಿ ಬಹಳಷ್ಟು ಮುಂದಿದೆ, ಎಲ್ಲಾ ಜಾತಿ, ಮತ ಮತ್ತು ಧರ್ಮಗಳ ಮಕ್ಕಳೂ ಶಿಕ್ಷಣವಂತರಾಗುತ್ತಿದ್ದಾರೆ ಆದರೆ ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.

ಈ ಬೆಳವಣಿಗೆಯಿಂದಾಗಿ ದೇಶದಲ್ಲಿಂದು ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ, ವಿದ್ಯಾವಂತರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಆತಂಕದ ವಿಷಯವಾಗಿದೆ ಎಂದ ಅವರು ಪೋಷಕರು, ಶಿಕ್ಷಕರು ಮತ್ತು ವಿದ್ಯಾ ಸಂಸ್ಥೆಗಳು ಇದನ್ನು ಅರಿತು ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳು ವಿದ್ಯೆಯ ಜೊತೆಗೆ ವಿನಯ, ವಿಧೇಯತೆಯನ್ನೂ ಮೈಗೂಡಿಸಿಕೊಳ್ಳಬೇಕು, ಗುರು ಹಿರಿಯರನ್ನು, ಹೆತ್ತವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ್ ಮಾತನಾಡಿ ಮಕ್ಕಳು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಸಂಸ್ಥೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಖಜಾಂಚಿ ಸತೀಶ್, ಸದಸ್ಯರಾದ ಬಾಲಚಂದ್ರೇಗೌಡ, ಎಸ್.ಆರ್.ಕುಮಾರ್, ರಮೇಶ್, ಯು.ಬಿ.ಶಾಂತಕುಮಾರ್, ಮುಖ್ಯ ಶಿಕ್ಷಕ ಪೂರ್ಣೇಶ್, ಶಿಕ್ಷಕಿ ಶೃತಿ ಉಪಸ್ಥಿತರಿದ್ದರು.