ವಿದ್ಯಾರ್ಥಿಗಳು ಸರ್ಕಾರ, ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣವಂತರಾಗಬೇಕು: ತನೋಜ್ ನಾಯ್ಡು.

19
firstsuddi

ಚಿಕ್ಕಮಗಳೂರು: ವಿದ್ಯಾರ್ಥಿಗಳು ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣವಂತರಾಗಿ ಹೊರಹೊಮ್ಮಬೇಕು ಎಂದು ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ತನೋಜ್ ನಾಯ್ಡು ಸಲಹೆ ಮಾಡಿದರು.

ತಾಲೂಕಿನ ಮುಗುಳುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ ಅನುದಾನದಡಿ ಶಾಲೆಗೆ ಮೈಕ್ ಸೆಟ್ ವಿತರಿಸಿ ಅವರು ಮಾತನಾಡಿದರು.

ಬಹಳಷ್ಟು ವರ್ಷಗಳ ಹಿಂದೆ ಬಡವರು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಹಳ್ಳಿಯ ಮಕ್ಕಳು ಶಾಲೆಗೆ ಹೋಗಲು ಮೈಲಿಗಟ್ಟಲೆ ನಡೆದು ಅವರಿವರ ಮನೆಯಲ್ಲಿ ವಾರಾನ್ನದ ಊಟ ಮಾಡಿ ಶಿಕ್ಷಣವನ್ನು ಪಡೆಯಬೇಕಿತ್ತು ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಬಡವರು ಮತ್ತು ಹಳ್ಳಿಯ ಮಕ್ಕಳಿಗೆ ಶಿಕ್ಷಣ ಸುಲಭವಾಗಿದೆ. ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಹಲವಾರು ಸವಲತ್ತುಗಳನ್ನು ನೀಡುತ್ತಿವೆ ಅವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ರೋಟರಿ ವಲಯ ಉಪರಾಜ್ಯಪಾಲ ಕೆ ಬಿ ಅನಂತೇಗೌಡ ಮಾತನಾಡಿ, ವಿದ್ಯಾರ್ಥಿಗಳು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣವಂತರಾಗಿ ಹೊರಹೊಮ್ಮಿದಾಗ ಮಾತ್ರ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಶ್ರಮ ಸಾರ್ಥಕವಾಗುತ್ತದೆ ಎಂದರು.

ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, ರೋಟರಿಕ್ಲಬ್ ಮತ್ತು ರೋಟರಿಕಾಫಿ ಲ್ಯಾಂಡ್ ಸಂಸ್ಥೆಗಳ ಸೇವಾ ಕಾರ್ಯಗಳನ್ನು ಇನ್ನಿತರ ಸಂಘ ಸಂಸ್ಥೆಗಳು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಗುರುಮೂರ್ತಿ, ರೋಟರಿ ಕಾಫಿ ಲ್ಯಾಂಡ್ ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಜಗದೀಶ್, ಆನಂದ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೂಪ ಉಪಸ್ಥಿತರಿದ್ದರು.