ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ‘ವಿದ್ಯುತ್ ಕಳ್ಳ ಹೆಚ್ಡಿ ಕುಮಾರಸ್ವಾಮಿ’ ಎಂಬ ಅವಹೇಳನಕಾರಿ ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದ ಗೋಡೆಗಳಲ್ಲಿ ಪೋಸ್ಟರ್ ಅಂಟಿಸಿದ್ದು, ಈ ಸಂಬಂಧ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ಗೌಡ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರಾದ ಬಿಂದುಗೌಡ, ನವೀನ್‌ಗೌಡ ಸೇರಿದಂತೆ ಒಟ್ಟು 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಗಳವಾರ ಬೆಂಗಳೂರಿನ ಜೆಡಿಎಸ್ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ ಕಚೇರಿಯ ಗೋಡೆಗಳಲ್ಲಿ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂಬ ಪೋಸ್ಟರ್ಗಳನ್ನು ಅಂಟಿಸಿದ್ದರು. ಹಾಗೂ ಇದನ್ನು ತಡೆಯಲು ಬಂದ ಸೆಕ್ಯೂರಿಟಿ ಮೇಲೆ ಕೀ ಬಂಚ್ನಿಂದ ಹಲ್ಲೆ ಮಾಡಿದ್ದಾರೆ ಎಂದು ರಮೇಶ್ ಗೌಡ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅವಹೇಳನಕಾರಿ ಪೋಸ್ಟರ್ ಅಂಟಿಸಿ ಸೆಕ್ಯೂರಿಟಿಗೆ ಬೆದರಿಸಿದ ಆರೋಪದ ಮೇರೆಗೆ ಶ್ರೀರಾಮಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 448, 504, 324, 506, 149 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಬಿಂದುಗೌಡ A-5, ನವೀನ್‌ಗೌಡ A-6 ಆರೋಪಿಯಾಗಿದ್ದಾರೆ.
ಕುಮಾರಸ್ವಾಮಿ ಅವರು ತಮ್ಮ ನಿವಾಸದ ದೀಪಾಲಂಕಾರಕ್ಕೆ ಬೀದಿ ದೀಪದ ಕಂಬದಿಂದ ಅನಧಿಕೃತವಾಗಿ ವಿದ್ಯುತ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೇ ಈ ಬಗ್ಗೆ ವೀಡಿಯೋ ಸಹ ಬಿಡುಗಡೆ ಮಾಡಿತ್ತು. ಈ ಸಂಬಂಧ ಬೆಸ್ಕಾಂ ಸಿಬ್ಬಂದಿ ಸಹ ಹೆಚ್ಡಿಕೆ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.










