ಬೆಳಗಾವಿ : ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಧಾನಸಭೆ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸಲಾಯಿತು.
ಕಾಂಗ್ರೆಸ್ ವಿರೋಧಿಸುತ್ತಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 2021ರ ಕರ್ನಾಟಕ ಧಾರ್ಮಿಕ ಹಕ್ಕು ವಿಧೇಯಕವನ್ನು ಮಂಡಿಸಿದರು. ಈ ವೇಳೆ ಕಲಾಪದಲ್ಲಿ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕದ್ದು ಮುಚ್ಚಿ ಮಸೂದೆ ಯಾಕೆ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು. ಶಿವಕುಮಾರ್ ಮಾತು ವಾಪಸ್ ತೆಗೆದುಕೊಳ್ಳಬೇಕು. ಕದ್ದುಮುಚ್ಚಿ ಮಾಡಿಲ್ಲ, ಅಜೆಂಡಾದಲ್ಲಿ ತಂದೇ ಮಾಡಿರುವುದು. ನಾಳೆ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದು ಸ್ಪೀಕರ್ ತಿಳಿಸಿದರು. ಇದನ್ನು ಒಪ್ಪದ ಸಿದ್ದರಾಮಯ್ಯ, ಇದೊಂದು ಕೆಟ್ಟ ಸರ್ಕಾರ, ವಿಧಾನಸಭೆ ನಡೆಸೋದು ಹೀಗೆನಾ ಎಂದು ಖಾರವಾಗಿ ಪ್ರಶ್ನಿಸಿದರು.
ಈ ವೇಳೆ ವಿಧಾನಸಭೆಯಲ್ಲಿ ಅತಿವೃಷ್ಟಿ ಹಾನಿ ಬಗ್ಗೆ ನಡೆದ ಚರ್ಚೆಗೆ ಸರ್ಕಾರದ ಉತ್ತರ ಕೊಡಲು ಸ್ಪೀಕರ್ ಸೂಚನೆ ನೀಡಿದರು. ಉತ್ತರ ಕೊಡಲು ಕಂದಾಯ ಸಚಿವ ಅಶೋಕ್ ಎದ್ದು ನಿಂತಾಗ, ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಈ ಬಿಲ್ ಅಷ್ಟು ಅರ್ಜೆಂಟ್ ಇತ್ತಾ ಎಂದು ಪ್ರಶ್ನಿಸಿದರು. ಆಗ ಡಿ.ಕೆ.ಶಿವಕುಮಾರ್ ಮಸೂದೆ ಪ್ರತಿಯನ್ನು ಹರಿದು ಹಾಕಿದರು. ಡಿಕೆಶಿ ನೀವು ಹಿರಿಯ ಶಾಸಕರು, ಬಿಲ್ ಹರಿದು ಹಾಕಿದ್ದು ಸರಿಯಲ್ಲ ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ಮತಾಂತರ ನಿಷೇಧ ಮಸೂದೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.










