ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಅವುಗಳಿಗೆ ಅಂಕುಶ ಹಾಕಲು ಮತ್ತು ಜನರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಸ್ಪೀಕರ್ ಯು.ಟಿ ಖಾದರ್ ವಿಧಾನಸೌಧ ಆವರಣದಲ್ಲೇ ಶ್ವಾನಗಳಿಗೆ ಪ್ರತ್ಯೇಕ ಸ್ಥಳ ಗುರುತಿಸಿ ಶೆಲ್ಟರ್ ನಿರ್ಮಿಸಲು ಮುಂದಾಗಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಸಭಾಧ್ಯಕ್ಷ ಯು.ಟಿ ಖಾದರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ವಿಧಾನಸೌಧ ಆವರಣದಲ್ಲಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿವಿಧ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ವಿಧಾನಸೌಧ ಆವರಣದಲ್ಲಿ ಸುಮಾರು 54 ಬೀದಿ ನಾಯಿಗಳು ಇವೆ. ಈ ಬೀದಿ ನಾಯಿಗಳ ಓಡಾಟದಿಂದ ಸಾರ್ವಜನಿಕರಿಗೆ, ಅಧಿಕಾರಿಗಳಿಗೆ, ವಾಹನ ಚಾಲಕರಿಗೆ ಸಮಸ್ಯೆ ಎದುರಾಗುತ್ತಿದೆ. ಶಾಲಾ ಮಕ್ಕಳು ವಿಧಾನಸೌಧಕ್ಕೆ ಬರುವಾಗ ಬೀದಿ ನಾಯಿಗಳು ದಾಳಿ ನಡೆಸಲು ಮುಂದಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇತ್ತ ವಿಧಾನಸೌಧ ಆವರಣ, ಪಾರ್ಕ್, ನೆಲ ಮಹಡಿ, ವರಾಂಡಗಳಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುತ್ತವೆ. ಸರ್ಕಾರಿ ಸಾಮಾರಂಭದ ವೇಳೆಯೂ ವಿಧಾನಸೌಧದಲ್ಲಿನ ಬೀದಿ ನಾಯಿಗಳು ಅಪಾಯ ಉಂಟು ಮಾಡುತ್ತಿವೆ ಎಂಬ ದೂರುಗಳು ಕೇಳಿ ಬಂದಿತ್ತು. ಆದ್ದರಿಂದ ಅವುಗಳ ನಿಯಂತ್ರಣಕ್ಕೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.










