ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕನ ಬಂಧನ…

50
firstsuddi

ಬೆಂಗಳೂರು: ಕೋಲ್ಕತ್ತಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪದ ಮೇಲೆ ಪ್ರಯಾಣಿಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಜಿ ಕರುಣಾಕರನ್ ಬಂಧಿತ ವ್ಯಕ್ತಿ. ಆರೋಪಿ ವಿರುದ್ಧ ಸೆಕ್ಷನ್ 336ರ ಅಡಿಯಲ್ಲಿ ಸಾರ್ವಜನಿಕ ಸುರಕ್ಷತೆಗೆ ದಕ್ಕೆ, ಸೆಕ್ಷನ್ 25 (3ಬಿ) ನಿಯಮ ಉಲ್ಲಂಘನೆ ಮತ್ತು ಏರ್‌ಕ್ರಾಫ್ಟ್ ನಿಯಮ 1937ರ ಅಡಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿ ಕರುಣಾಕರನ್ ಎಂಬುವವರು ಸೆಪ್ಟೆಂಬರ್ 3ರ ರಾತ್ರಿ 9.11ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ 6e 487 ವಿಮಾನದಲ್ಲಿ 24 A ಆಸನದಲ್ಲಿ ಕುಳಿತಿದ್ದರು. ಕೋಲ್ಕತ್ತಾದಿಂದ ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ವಿಮಾನದ ಹಿಂಭಾಗದಲ್ಲಿ ಸುಡುವ ವಾಸನೆ ಬರುತ್ತಿರುವುದನ್ನು ಪ್ರಯಾಣಿಕರು ಗಮನಿಸಿದ್ದಾರೆ.

ವಾಸನೆ ಶೌಚಾಲಯದಿಂದ ಬರುತ್ತಿರುವುದಾಗಿ ತಿಳಿದುಬಂದಿದೆ. ತಕ್ಷಣವೇ ಈ ವಿಚಾರವನ್ನು ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ತಿಳಿಸಿದ್ದಾರೆ. ನಂತರ ಸಿಬ್ಬಂದಿ ಶೌಚಾಲಯದ ಬಾಗಿಲು ತಟ್ಟಿದ್ದಾರೆ.

ಒಳಗಿದ್ದ ಜಿ ಕರುಣಾಕರನ್ ಬಾಗಿಲು ತೆಗೆದಿದ್ದು, ಈ ವೇಳೆ ಅವರ ಕೈಯಲ್ಲಿ ಬೀಡಿ ಇರುವುದು ಕಂಡಿದೆ. ಜಿ ಕರುಣಾಕರನ್ ತಕ್ಷಣವೇ ಅರ್ಧ ಸೇದಿದ ಬೀಡಿಯನ್ನು ಶೌಚಾಲಯದೊಳಗೆ ಹಾಕಿ ಫ್ಲಶ್ ಮಾಡಲು ಯತ್ನಿಸಿರುವುದೂ ಕೂಡ ಕಂಡು ಬಂದಿದೆ. ಕೂಡಲೇ ಫ್ಲೈಟ್ ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದಾರೆ.

ಬಳಿಕ ವಿಮಾನವು ಕೆಐಎನಲ್ಲಿ ಲ್ಯಾಂಡ್ ಆದ ತಕ್ಷಣ, ಜಿ ಕರುಣಾಕರನ್ ಅವರನ್ನು ಬಂಧಿಸಲಾಗಿದೆ.