ವಿಜಯಪುರ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದಲ್ಲಿ ನಡೆದಿದೆ.
ಶಿವಣ್ಣ ಚೌಧರಿ (40) ಎಂಬಾತನೇ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಸಾವಿಗೂ ಮುನ್ನ ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಮಹಿಳೆಯೇ ತನ್ನ ಸಾವಿಗೆ ಕಾರಣವೆಂದು ವಾಟ್ಸಪ್ ಸ್ಟೇಟಸ್ನಲ್ಲಿ ಮಹಿಳೆಯ ಫೋಟೋ ಹಾಕಿ, ಗ್ರಾಮದ ಕೆಲವರ ಹೆಸರು ಉಲ್ಲೇಖಿಸಿದ್ದಾನೆ. ಅಲ್ಲದೇ ಆಕೆಗೆ ನೀಡಿರುವ ಹಣ ನನ್ನ ಮಕ್ಕಳಿಗೆ ಕೊಡಿಸಿ ಎಂದು ವೀಡಿಯೊ ಚಿತ್ರೀಕರಿಸಿ, ಡೆತ್ನೋಟ್ ಬರೆದಿಟ್ಟು ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ಮನೆಯವರ ವಿರೋಧ ಕಟ್ಟಿಕೊಂಡು ಆಕೆ ಜೊತೆಗಿದ್ದೆ, ಹಣವನ್ನೂ ನೀಡಿದ್ದೆ. ನನ್ನ ಬಳಿ ಹಣ ಖಾಲಿಯಾದ ಬಳಿಕ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಎಂದು ಹೇಳಿ ನನ್ನನ್ನು ದೂರ ಮಾಡಿದ್ದಾಳೆ. ಆಕೆಗೆ ತಕ್ಕ ಪಾಠವಾಗಬೇಕು. ನನ್ನ ಮೂವರು ಮಕ್ಕಳು ಅನಾಥವಾದರೂ ಪರವಾಗಿಲ್ಲ, ಆಕೆಗೆ ಶಿಕ್ಷೆಯಾಗಬೇಕು. ನಾನು ಆಕೆಗೆ ನೀಡಿರುವ ಹಣ ನನ್ನ ಮಕ್ಕಳಿಗೆ ಕೊಡಿಸಿ ಎಂದು ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ.
ಆಕೆ ಹಲವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಮೃತ ಶಿವಣ್ಣ ಆರೋಪಿಸಿದ್ದಾನೆ. ಇದರ ಜೊತೆಗೆ ಪಿ.ಹೆಚ್.ಬೂದಿಹಾಳ ಗ್ರಾಮದ ಕೆಲವರ ಹೆಸರು ಹೇಳಿರುವ ಶಿವಣ್ಣ ಚೌಧರಿ, ಸಿದ್ದು ವಾಲೀಕಾರ ಮಾಟಮಂತ್ರ ಮಾಡಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಾನೆ. ಸಿದ್ದು ವಾಲೀಕಾರಗೆ ಮೊಹಮ್ಮದ್ ಸಾಬ್ ಫತೇಪುರ, ಬಾಬು ನಾಟಿಕಾರ, ಮಲಕಪ್ಪ ಸಹಾಯ ಮಾಡುತ್ತಿದ್ದಾರೆಂದು ವೀಡಿಯೊದಲ್ಲಿ ಉಲ್ಲೇಖಿಸಿ ಬಳಿಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಘಟನಾ ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










