ವೈದ್ಯರ ಎಡವಟ್ಟಿಗೆ 10 ವರ್ಷದ ಬಾಲಕ ಸಾವು…

70
firstsuddi

ಬೆಂಗಳೂರು: ವೈದ್ಯರ ಎಡವಟ್ಟಿನಿಂದಾಗಿ ಹತ್ತು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ನಗರದ ಕೋಣನಕುಂಟೆ ನಿವಾಸಿ ಪ್ರೀತಮ್ ನಾಯ್ಕ್ (10) ಎಂಬ ಬಾಲಕ ವೈದ್ಯರ ಎಡವಟ್ಟಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಪ್ರೀತಮ್​ಗೆ ಅ.6ರಂದು ಜ್ವರ ಕಾಣಿಸಿಕೊಂಡಿತ್ತು. ಜ್ವರ ಹೆಚ್ಚಾದ ಹಿನ್ನೆಲೆ ಕುಟುಂಬಸ್ಥರು ತಮ್ಮ ಹತ್ತಿರದ ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಅಲ್ಲಿನ ವೈದ್ಯರು ಜ್ವರ ಕಡಿಮೆ ಆಗಲೆಂದು ಒಂದು ಇಂಜೆಕ್ಷನ್ ನೀಡಿ ಬಾಲಕನನ್ನು ಮನೆಗೆ ಕಳಿಸಿದ್ದಾರೆ. ವಾಪಸ್ಸು ಮನೆಗೆ ಬಂದ ಬಳಿಕ ಮರುದಿನ ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ನೋವು, ಊತ ಕಂಡು ಬಂದಿದೆ. ಆಗ ಗಾಬರಿಗೊಂಡ ಪೋಷಕರು ಮತ್ತೆ ತಕ್ಷಣ ಮಗನನ್ನು ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ವೈದ್ಯ ಊತ ನೋಡಿ ಕೆಲ ಟಾನಿಕ್ ಮತ್ತು ಮೆಡಿಸಿನ್ ನೀಡಿ ಕಳಿಸಿದ್ದಾರೆ. ನೋವು ಕಡಿಮೆ ಆಗದೆ ಕಾಲು ಊತ ಹೆಚ್ಚಾಗಿದೆ. ಆಗ ಇಲ್ಲಿ ಏನು ಮಾಡಲು ಆಗಲ್ಲಾ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ.

ನಂತರ ಅ.8ರಂದು ರಾಜನಂದಿನಿ ಆಸ್ಪತ್ರೆಯಿಂದ ಸ್ಥಳೀಯ ಮತ್ತೊಂದು ಆಸ್ಪತ್ರೆಗೆ ಮಗನನ್ನು ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಕೂಡ ಚಿಕಿತ್ಸೆ ಆಗಲ್ಲ ಎಂದಾಗ ಅದೇ ದಿನ ಸ್ಥಳೀಯ ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದೆ.

ರಾತ್ರಿ ಹತ್ತು ಘಂಟೆ ಸುಮಾರಿಗೆ ರಾಜಾಜಿನಗರ ಇಎಸ್ಐ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದ್ದು, ಬಾಲಕನಿಗೆ ಕಿಡ್ನಿ ಫೇಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಅ.9ರಂದು ಬಾಲಕನನ್ನು ನಾರಾಯಣ ಹೃದಯಾಲಯಕ್ಕೆ ದಾಖಲು ಮಾಡಲು ಹೋಗುತ್ತಿದ್ದಾಗ ದಾರಿ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಘಟನೆ ಬಳಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಬಾಲಕನ ಕುಟುಂಬಸ್ಥರು ದೂರು ನೀಡಿದ್ದು, ರಾಜನಂದಿನಿ ಆಸ್ಪತ್ರೆ ವೈದ್ಯರ ವಿರುದ್ದ CRPC 174C ಅಡಿಯಲ್ಲಿ ಕೇಸ್ ದಾಖಲಾಗಿದೆ.