ನವದೆಹಲಿ : ಮಹಿಳೆಯೊಬ್ಬರು ಸ್ವಇಚ್ಛೆಯಿಂದ ಪುರುಷನೊಂದಿಗೆ ಇದ್ದಾಗ ಸಂಬಂಧ ಹಾಳಾದರೆ ಆ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅತ್ಯಾಚಾರ, ಅಸಹಜ ಅಪರಾಧಗಳು ಹಾಗೂ ಕ್ರಿಮಿನಲ್ ಬೆದರಿಕೆ ಆರೋಪ ಎದುರಿಸುತ್ತಿದ್ದ ಅನ್ಸಾರ್ ಮೊಹಮ್ಮದ್ ಅವರ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರಿದ್ದ ದ್ವೀ-ಸದಸ್ಯ ಪೀಠವು ಅನ್ಸಾರ್ ಗೆ ಜಾಮೀನು ನೀಡಿದ್ದು, ಸಂಬಂಧ ಹಾಳಾದ ಕಾರಣಕ್ಕೆ ಅದನ್ನೇ ಆಧಾರವಾಗಿಟ್ಟುಕೊಂಡು ಐಪಿಸಿಯ ಸೆಕ್ಷನ್ 376(2)(ಎನ್) ಅಡಿಯಲ್ಲಿ ಎಫ್ ಐಆರ್ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.
ಅನ್ಸಾರ್ ಜೊತೆ ದೂರುದಾರೆ ಕಳೆದ 4 ವರ್ಷಗಳಿಂದಲೂ ಸಂಬಂಧ ಹೊಂದಿದ್ದು ಆಕೆ ಮತ್ತು ಅನ್ಸಾರ್ ನಡುವೆ ಸಂಬಂಧ ಬೆಳೆದಾಗ ಮಹಿಳೆಗೆ 21 ವರ್ಷ ವಯಸ್ಸಾಗಿತ್ತು ಎಂಬುದನ್ನೂ ದೂರುದಾರೆ ಒಪ್ಪಿಕೊಂಡಿದ್ದಾರೆ. ಈ ಅಂಶವನ್ನು ಗಮನಿಸಿದ ನ್ಯಾಯಾಲಯವು ಅನ್ಸಾರ್ ಗೆ ನಿರೀಕ್ಷಣಾ ಜಾಮೀನು ನೀಡಲು ನಿರ್ಧರಿಸಿತು.
ಐಪಿಸಿಯ ಸೆಕ್ಷನ್ 376(2)(ಎನ್), 377 ಹಾಗೂ 506 ರ ಅಡಿಯಲ್ಲಿ ಎದುರಿಸುತ್ತಿರುವ ಆರೋಪಗಳಿಗೆ ಬಂಧನದಿಂದ ವಿನಾಯಿತಿ ನೀಡುವಂತೆ ಜಾಮೀನು ಕೋರಿ ಅನ್ಸರ್ ಮೊಹಮ್ಮದ್ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಮೇ.19 ರಂದು ತಿರಸ್ಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ನ ಆದೇಶವನ್ನು ಅನ್ಸಾರ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.










