ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಬಳಿ ಮೃತದೇಹ ಸಾಗಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಆಸ್ಪತ್ರೆಯಲ್ಲಿ 66 ವರ್ಷದ ಹುಲಿಗೆಮ್ಮ ಎಂಬುವರು ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ಹೀಗಾಗಿ ಕಾರಿನಲ್ಲಿ ಹುಲಿಗೆಮ್ಮನ ಮೃತದೇಹವನ್ನು ಬೆಂಗಳೂರಿನಿಂದ ದೇಸನೂರಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ರಾಂಪುರ ಗ್ರಾಮ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಇನ್ನು ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದರೆ, ಉಳಿದ 3 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ರಾಂಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತರೆಲ್ಲರೂ ಸಿರುಗುಪ್ಪ ಮೂಲದವರಾಗಿದ್ದಾರೆ. ಸುರೇಶ್ (40) , ಮಲ್ಲಿಕಾರ್ಜುನ (25) ಮತ್ತು ಭೂಮಿಕ (9) ಮೃತ ದುರ್ದೈವಿಗಳು. ಇನ್ನು ನಾಗಮ್ಮ (31), ತಾಯಮ್ಮ (56), ಧನರಾಜ್ (39) ಹಾಗೂ ಚಾಲಕ ಶಿವು (26) ಗಂಭೀರ ಗಾಯಾಳುಗಳು ಎಂದು ಗುರುತಿಸಲಾಗಿದೆ.
ಇನ್ನೂ ಈ ಬಗ್ಗೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಿಎಸ್ಐ ಪರಶುರಾಮ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಕೂಡ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನ ಟೈರ್ ಬ್ಲಾಸ್ಟ್ ಆಗಿದ್ದೇ ಕಾರು ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










