ಕೈರೋ: ಸಮುದ್ರದಲ್ಲಿ ಈಜಾಡುತ್ತಿದ್ದ ರಷ್ಯಾ ಮೂಲದ ಪ್ರವಾಸಿಗನನ್ನು ಟೈಗರ್ ಶಾರ್ಕ್ ಕೊಂದು ತಿಂದಿರುವ ಘಟನೆ ಈಜಿಪ್ಟ್‌ನ ಹುರ್ಘಾಡ ನಗರದಲ್ಲಿರುವ ರೆಡ್ ಸೀ ರೆಸಾರ್ಟ್‌ನಲ್ಲಿ ನಡೆದಿದೆ.
ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರವಾಸಿಗ ವ್ಲಾಡಿಮಿರ್ ಪೊಪೊವ್ (23) ಎಂದು ಗುರುತಿಸಲಾದ ವ್ಯಕ್ತಿ ಮೇಲೆ ದಾಳಿ ಮಾಡಿದ್ದು ಟೈಗರ್ ಶಾರ್ಕ್ ಎಂದು ಈಜಿಪ್ಟ್‌ನ ಪರಿಸರ ಸಚಿವಾಲಯ ತಿಳಿಸಿದೆ.
ಅಪ್ಪನ ಕಣ್ಣೆದುರೇ 23 ವರ್ಷದ ಮಗನನ್ನು ಶಾರ್ಕ್ ಕಚ್ಚಿ ಎಳೆದಾಡಿ ನುಂಗಿ ಹಾಕಿದ್ದು, ಆತ ಪಪ್ಪ ಪಪ್ಪ ಎಂದು ಕಿರುಚಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತಿದೆ. ಇತ್ತ ಈತನ ತಂದೆ ಮಗನನ್ನು ರಕ್ಷಿಸಲಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಾ ನಿಂತಿದ್ದು, ಮಗನನ್ನು ರಕ್ಷಿಸುವಂತೆ ಅಂಗಲಾಚುತ್ತಿರುವುದು ಕೇಳಿ ಬಂದಿದೆ. ನೀರಿನ ಮಧ್ಯೆ ಹೊಡೆದಾಟ ಹಾಗೂ ಕಿರುಚಾಟದ ಜೊತೆ ಕ್ಷಣದಲ್ಲಿ ನೀರು ರಕ್ತದಿಂದ ಕೆಂಪಾಗಿದೆ. ರೆಸಾರ್ಟ್‌ನ ಹೋಟೆಲ್ ಸಿಬ್ಬಂದಿ ಎಚ್ಚರಿಕೆ ಕರೆಗಂಟೆ ಬಾರಿಸಿ ಇತರ ಸ್ವಿಮ್ಮರ್‌ಗಳನ್ನು ಸಮುದ್ರದಿಂದ ಮೇಲೆ ಬರುವಂತೆ ಕೇಳಿದ್ದಾರೆ. ಇದು ಕೇವಲ ಕೆಲ ಕ್ಷಣಗಳಲ್ಲಿ ನಡೆದು ಹೋಗಿದೆ.
ರಕ್ಷಣಾ ತಂಡ ಕೂಡಲೇ ಕಾರ್ಯಾಚರಣೆಗೆ ಇಳಿಯಿತಾದರೂ ಅದೂ ಶಾರ್ಕ್ ಎಂಬುದು ಕೂಡಲೇ ನನ್ನ ಗಮನಕ್ಕೆ ಬಂತು. ನಾನು ಕೂಡಲೇ ಶಾರ್ಕ್ ಶಾರ್ಕ್ ಎಂದು ಬೊಬ್ಬೆ ಹಾಕಿದೆ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ಹೇಳಿದೆ. ಆದರೆ ಯಾರು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ರಷ್ಯಾದ ಪ್ರವಾಸಿಗರು ನೀರಿನಲ್ಲಿದ್ದಾಗ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿದ ಯಾವುದೇ ಈಜು ನಿಷೇಧಗಳಿಗೆ ಬದ್ಧರಾಗಿರಬೇಕು ಎಂದು ರಷ್ಯಾ ರಾಯಭಾರ ಕಚೇರಿ ಎಚ್ಚರಿಸಿದೆ.










