ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಗುರುತು ಬಳಸುವಂತಿಲ್ಲ – ವಿಚಾರಣೆ ಫೆ.14ಕ್ಕೆ ಮುಂದೂಡಿಕೆ…

67
firstsuddi

ಬೆಂಗಳೂರು : ಶಾಲಾ – ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸುವಂತಿಲ್ಲ ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಶಾಲಾ ಕಾಲೇಜುಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಖಾಜಿ ಜೈಬುನ್ನೀಸಾ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

ಪ್ರಕರಣದ ಕುರಿತು ಶೀಘ್ರವೇ ತೀರ್ಪು ನೀಡಲಾಗುವುದು. ಅಲ್ಲಿಯವರೆಗೂ ರಾಜ್ಯದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮಧ್ಯಂತರ ತೀರ್ಪು ನೀಡಿ ಆದೇಶಿಸಿದ್ದಾರೆ.

ಮುಂದಿನ ಆದೇಶ ಬರುವವರೆಗೂ ಕಾಲೇಜಿಗೆ ಯಾರೂ ಸಹ ಹಿಜಬ್ ಮತ್ತು ಕೇಸರಿ ಶಾಲನ್ನು ಧರಿಸಿ ಹೋಗುವಂತಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ತಿಳಿಸಿದ್ದು, ಶಾಲೆಯನ್ನು ನಾಳೆಯಿಂದ ಆರಂಭಿಸಲೇಬೇಕು. ಸಾಂವಿಧಾನತ್ಮಕ ಪ್ರಶ್ನೆಗಳು ಎದ್ದಿರುವ ಕಾರಣ ವಿಚಾರಣೆಯನ್ನು ಗಂಭೀರವಾಗಿ ನಡೆಸಲಾಗುವುದು ಎಂದು ಹೇಳಿರುವ ಪೀಠ ವಿಚಾರಣೆಯನ್ನು ಸೋಮವಾರ(ಫೆ.14)ಕ್ಕೆ ಮುಂದೂಡಿದೆ.