ತಮಾಷೆಗಾಗಿ ಬಾಂಬ್ ಬೆದರಿಕೆ ಹಾಕಿದ್ದೆ ; ವಿಚಾರಣೆ ವೇಳೆ ಬಾಯ್ಬಿಟ್ಟ ಅಪ್ರಾಪ್ತ ಬಾಲಕ.

45
firstsuddi

ಬೆಂಗಳೂರು : ರಾಜಾಜಿನಗರದಲ್ಲಿರುವ ಎನ್​ಪಿಎಸ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಇಮೇಲ್ ಸಂದೇಶ ರವಾನಿಸಿರುವುದು ಅಪ್ರಾಪ್ತ ಬಾಲಕ ಎಂಬುದು ಬಯಲಾಗಿದೆ. ಗೂಗಲ್ ನಲ್ಲಿ ಎನ್ ಪಿಎಸ್ ಶಾಲೆಯ ಅಧಿಕೃತ ಇಮೇಲ್ ವಿಳಾಸ ಪಡೆದಿದ್ದ ವಿದ್ಯಾರ್ಥಿ ತಮಾಷೆಗಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. 

ರಾಜಾಜಿನಗರದ ಎನ್​ಪಿಎಸ್ ಶಾಲೆಗೆ ಜನವರಿ 5 ರಂದು ರಾತ್ರಿ 8.30ರ ಸುಮಾರಿಗೆ ಬಂದಿದ್ದ ಇಮೇಲ್ ನಲ್ಲಿ ‘ನನ್ನ ಬಳಿ 4 ಜಿಲೇಟಿನ್ ಕಡ್ಡಿಗಳಿವೆ. ನಾಳೆ ಊಟದ ಸಮಯದಲ್ಲಿ ಬ್ಲಾಸ್ಟ್ ಮಾಡ್ತೀನಿ’ ಎಂದು ಬರೆಯಲಾಗಿತ್ತು. ನಿನ್ನೆ ಬೆಳಗ್ಗೆ ಇಮೇಲ್ ಪರಿಶೀಲಿಸಿದ ಶಾಲಾ ಆಡಳಿತ ಮಂಡಳಿ ಕೂಡಲೇ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಬಸವೇಶ್ವರ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದೆ.

ಮಾಹಿತಿ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಹಾಗೂ ಶ್ವಾನ ದಳ ಸ್ಥಳಕ್ಕೆ ಬಂದು ಪೂರ್ತಿ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಗೊತ್ತಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಅಪ್ರಾಪ್ತ ಬಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜಸ್ಟ್ ಫನ್‍ಗಾಗಿ ಈ ಕೆಲಸ ಮಾಡಿದ್ದೀನಿ ಎಂದು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕನನ್ನು ರಾಜ್ಯ ಬಾಲ ನ್ಯಾಯಮಂಡಳಿ ವಶಕ್ಕೆ ಒಪ್ಪಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.