ಬೆಂಗಳೂರು : ಶಿಕ್ಷಣ ಇಲಾಖೆ ಯಾವುದೇ ಶಾಲೆಯಲ್ಲಿ ಗಣೇಶ ಕೂರಿಸಿ ಅಂತ ಅನುಮತಿಯೂ ಕೊಟ್ಟಿಲ್ಲ, ಕೂರಿಸಬೇಡಿ ಅಂತಾನೂ ಹೇಳಿಲ್ಲ ಎಂದು ಶಾಲೆಯಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸ್ಪಷ್ಟನೆ ನೀಡಿದ್ದಾರೆ.
ಗಣೇಶ ಹಬ್ಬ ಬಿಜೆಪಿ ಸರ್ಕಾರ ಬಂದಾಗಿನಿಂದ ಮಾಡಿದ್ದು ಅಲ್ಲ. ಬ್ರಿಟಿಷರ ಕಾಲದಿಂದಲೂ ಗಣೇಶೋತ್ಸವ ಮಾಡಿಕೊಂಡು ಬರಲಾಗ್ತಿದೆ. ಹಿಂದೆ ಯಾವ ರೀತಿ ನಡೆಯುತ್ತಿತ್ತೋ ಅದೇ ರೀತಿ ನಡೆದುಕೊಂಡು ಬರಲಿದೆ. ಶಿಕ್ಷಣ ಇಲಾಖೆಯಿಂದ ಅನುಮತಿ ಕೊಟ್ಟಿದ್ದಾರೆ ಅನ್ನೋದು ಸುಳ್ಳು ಸುದ್ದಿ. ಈಗ ಇರೋ ನಿಯಮಗಳೇ ಮುಂದೆಯೂ ಇರಲಿದೆ. ಆದ್ರೆ ನಮಾಜ್ ಗೆ ಅವಕಾಶ ಕೊಡೋಕೆ ಸಾಧ್ಯವೇ ಇಲ್ಲ. ಶಾಲೆಗಳಲ್ಲಿ ಹೊಸ ಹೊಸ ಸಂಪ್ರದಾಯ ಹುಟ್ಟುಹಾಕೋಕೆ ಅವಕಾಶ ಇಲ್ಲ ಎಂದು ಸಚಿವರು ಹೇಳಿದ್ದಾರೆ.
ವಕ್ಫ್ ಬೋರ್ಡ್ ಬೇಡಿಕೆಗಳೇನು?
ಶಾಲೆಗಳಲ್ಲಿ ನಮಾಜ್ ಗೆ ಪ್ರತ್ಯೇಕ ಕೊಠಡಿ ಮೀಸಲಿಡಬೇಕು, ನಮ್ಮ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು, ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು, ಗಣೇಶ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆಗೂ ಅವಕಾಶ ಕೊಡಬೇಕು, ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು, ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಾ ಅದಿ ಅವರು ಬೇಡಿಕೆ ಇಟ್ಟಿದ್ದಾರೆ.










