ರಾಯಚೂರು: 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಹೇಯ ಕೃತ್ಯ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಪುಟ್ಟಮಾದಯ್ಯ ಮಾಹಿತಿ ನೀಡಿದ್ದಾರೆ. ಆರೋಪಿ ಶಿವನಗೌಡ ಮತ್ತು ಖಾಸಗಿ ಶಾಲೆಯ ಆಡಳಿತ ಮಂಡಳಿಯವರನ್ನು ಬಂಧಿಸಲಾಗಿದೆ. ಆರೋಪಿ ಉದ್ದೇಶಪೂರ್ವಕವಾಗಿ ಕೃತ್ಯವೆಸಗಿದ್ದಾನೆ. ಸಂತ್ರಸ್ತೆ ಬಾಲಕಿಯನ್ನು ಮಾನ್ವಿ ತಾಲೂಕು ಆಸ್ಪತ್ರೆಯಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್‍ಪಿ ಪುಟ್ಟಮಾದಯ್ಯ ಮಾಹಿತಿ ನೀಡಿದ್ದಾರೆ. ಎರಡನೇ ತರಗತಿಯಲ್ಲಿ ಓದುತ್ತಿರುವ 8 ವರ್ಷದ ಬಾಲಕಿ ಪ್ರತಿದಿನ ಶಾಲೆಯ ವಾಹನದಲ್ಲಿ ತೆರಳುತ್ತಿದ್ದಳು. ಹಾಗೆಯೇ ಬುಧವಾರ ಕೂಡ ಶಾಲೆಯ ವಾಹನದಲ್ಲೇ ತೆರಳಿದ್ದಳು. ಮಧ್ಯಾಹ್ನದ ವೇಳೆ ಅದೇ ಗ್ರಾಮದ ವ್ಯಕ್ತಿಯೋರ್ವ ಶಾಲೆಗೆ ತೆರಳಿ ನಿಮ್ಮ ತಾಯಿ ಕರೆಯುತ್ತಿದ್ದಾಳೆಂದು ಸುಳ್ಳು ಹೇಳಿ ಬಾಲಕಿಯನ್ನು ಶಾಲೆಯ ಬಳಿಯ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪೋಷಕರ ಅನುಮತಿಯಿಲ್ಲದೆ ಅಪರಿಚಿತರೊಂದಿಗೆ ಮಗುವನ್ನು ಕಳುಹಿಸಿದ ಶಾಲಾ ಸಿಬ್ಬಂದಿ ವಿರುದ್ಧ ಸಂತ್ರಸ್ತೆ ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಶಿವನಗೌಡ ಮತ್ತು ಶಾಲೆಯ ಮುಖ್ಯಸ್ಥರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.










