ಬೆಂಗಳೂರು: ದ್ವೇಷ ಭಾಷಣ ಮಾಡಿ ಸಾಬೀತಾದ್ರೆ ರಾಜ್ಯದಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ರಾಜ್ಯ ಸರ್ಕಾರದಿಂದ ಮಹತ್ವದ ಮಸೂದೆಯೊಂದನ್ನ ತರಲು ಸಿದ್ಧತೆ ನಡೆಸಿದ್ದು, ಬಜೆಟ್ ಅಧಿವೇಶನದಲ್ಲಿ ಬಿಲ್ ಮಂಡಿಸುವ ಸಾಧ್ಯತೆ ಇದೆ. ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ (ಹೋರಾಟ, ತಡೆಗಟ್ಟುವಿಕೆ ಮತ್ತು ಶಿಕ್ಷೆ) ವಿಧೇಯಕ 2025 ಕರಡನ್ನ ಕಾನೂನು ಇಲಾಖೆ ಸಿದ್ಧಪಡಿಸಿದೆ. ಜಾತಿ, ಧರ್ಮ ಆಧರಿಸಿ ದ್ವೇಷ ಭಾಷಣ ಮಾಡಿದ್ರೆ ಜೈಲು ಗ್ಯಾರಂಟಿ. ಧಾರ್ಮಿಕ, ಜನಾಂಗೀಯ, ಲಿಂಗ, ಜಾತಿ ಅಥವಾ ಸಮುದಾಯ, ಜನ್ಮ ಸ್ಥಳ, ಲೈಂಗಿಕ ದೃಷ್ಟಿಕೋನ, ಭಾಷೆ, ಅಂಗವೈಕಲ್ಯ ಬುಡಕಟ್ಟುವಿನ ಕುರಿತು ದ್ವೇಷ ಭಾಷಣ ಮಾಡುವಂತಿಲ್ಲ ಎಂಬುದನ್ನ ಬಿಲ್ ಕರಡಿನಲ್ಲಿದ್ದು, ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರ ಆಗುತ್ತದೆಯೇ ಎಂದು ಕಾದುನೋಡಬೇಕಿದೆ. ವಸೂದೆಯಲ್ಲಿ ಯಾವುದೇ ವ್ಯಕ್ತಿಗೆ ಹಾನಿ ಮಾಡುವ, ದ್ವೇಷ ಉತ್ತೇಜಿಸುವ, ಅದನ್ನು ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ, ಐದು ಸಾವಿರ ತನಕ ದಂಡ ವಿಧಿಸಲಾಗಿದೆ. ಯಾವುದೇ ಭಾವನಾತ್ಮಕ, ಮಾನಸಿಕ, ದೈಹಿಕ, ಸಾಮಾಜಿಕ ಅಥವಾ ಆರ್ಥಿಕ ಹಾನಿಯೂ ಶಿಕ್ಷೆ ವ್ಯಾಪ್ತಿಗೆ ತರಲು ಕರಡು ಸಿದ್ಧತೆ ಮಾಡಿಕೊಂಡಿದೆ.










