ಬಿಟ್ ಕಾಯಿನ್ ಪ್ರಕರಣ: ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್‍ಗೆ ಎಸ್‍ಐಟಿ ನೊಟೀಸ್.

50

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ ಆರೋಪ ಪ್ರಕರಣದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್‍ಗೆ ಬಂಧನ ಭೀತಿ ಎದುರಾಗಿದೆ. ಈ ಹಿಂದೆ ಬಿಟ್‍ಕಾಯಿನ್ ಪ್ರಮುಖ ಆರೋಪಿಯಾದ ಹ್ಯಾಕರ್ ಶ್ರೀಕಿ ಜೊತೆ ನಲಪಾಡ್‍ಗೆ ಸಂಪರ್ಕ ಇದೆ ಹಾಗೂ ವ್ಯವಹಾರಿಕ ನಂಟು ಇತ್ತು ಎಂದು ತನಿಖೆಯಲ್ಲಿ ಬಯಲಾಗಿದ್ದು, ಆರೋಪ ಹಿನ್ನೆಲೆಯಲ್ಲಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೆಕ್ಷನ್ 41ರಡಿ ವಿಶೇಷ ತನಿಖಾ ತಂಡ ನೋಟಿಸ್ ನೀಡಿದೆ. ಕೆಲವು ತಿಂಗಳ ಹಿಂದೆ ಕೂಡ ಎಸ್‍ಐಟಿ ಅಧಿಕಾರಿಗಳು ನಲಪಾಡ್ ಅವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದಿದ್ದರು. ಹ್ಯಾಕರ್ ಶ್ರೀಕಿಯಿಂದ ಕೋಟ್ಯಂತರ ರೂಪಾಯಿ ಹಣವನ್ನು ವ್ಯವಹಾರಿಕವಾಗಿ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ತನಿಖೆ ನಡೆಸಿದ್ದರು. ಪ್ರಮುಖ ಆರೋಪಿಯಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಲಪಾಡ್ ಆಪ್ತನಾಗಿದ್ದ ಎನ್ನುವ ಕಾರಣಕ್ಕೆ ಬೆಂಗಳೂರಿನ ಕಾಟನ್‍ಪೇಟೆ ಹ್ಯಾಕಿಂಗ್ ಪ್ರಕರಣದಲ್ಲಿ ಶ್ರೀಕಿ ಜೊತೆ ವ್ಯವಹಾರಿಕ ಸಂಬಂಧದ ಅನುಮಾನದಲ್ಲಿ ವಿಚಾರಣೆ ನಡೆಸಲಾಗಿತ್ತು. ಇದೀಗ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಆರೋಪಿ ಎಂದು ವಿಶೇಷ ತನಿಖಾ ತಂಡ ತಿಳಿಸಿದೆ.