ಶಿವಮೊಗ್ಗ : ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ತೊಕ್ಕುಟ್ಟುವಿನ ಮಜಿನ್ ಅಬ್ದುಲ್ ರೆಹಮಾನ್ ಹಾಗೂ ದಾವಣಗೆರೆ ಜಿಲ್ಲೆ ದೇವನಾಯಕನಹಳ್ಳಿಯ ನದೀಂ ಅಹಮದ್ ಬಂಧಿತ ಆರೋಪಿಗಳು.
ತುಂಗಾ ತೀರದಲ್ಲಿ ಬಾಂಬ್ ಸ್ಫೋಟಿಸಿದ ಆರೋಪದಡಿ 19 ಸೆಪ್ಟೆಂಬರ್ 2022ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನವೆಂಬರ್ 4ರಂದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಎನ್ ಐಎ ಈ ಮೊದಲು ನಾಲ್ವರು ಆರೋಪಿಗಳನ್ನು ಬಂಧಿಸಿತ್ತು.
ಪ್ರಕರಣದಲ್ಲಿ ಸೈಯದ್ ಯಾಸೀನ್, ಮಾಝ್ ಮುನೀರ್, ಶಾರೀಕ್ ಅಹಮ್ಮದ್ ಎಂಬವರನ್ನು ಬಂಧಿಸಲಾಗಿತ್ತು. ಯಾಸೀನ್ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದಿದ್ದರೆ, ಮತ್ತೋರ್ವ ಕೊಣಾಜೆಯ ನಡುಪದವು ಸಮೀಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದಾನೆ. ತೀರ್ಥಹಳ್ಳಿ ಮೂಲದ ಶಾರೀಕ್ ಅಹಮ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.










