ಶಿವಲಿಂಗಕ್ಕೆ ಪೊಲೀಸ್ ಭದ್ರತೆ ನೀಡಿ, ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿ ಉಂಟಾಗಬಾರದು : ಸುಪ್ರೀಂಕೋರ್ಟ್.

53
firstsuddi

ನವದೆಹಲಿ : ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ತಡೆ ಕೋರಿ ಸಲ್ಲಿಸಲಾದ ಅರ್ಜಿ ಮತ್ತು ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪತ್ತೆಯಾದ ಶಿವಲಿಂಗಕ್ಕೆ ಪೊಲೀಸ್ ಭದ್ರತೆ ನೀಡಿ, ಅಲ್ಲದೇ ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿ ಉಂಟಾಗಬಾರದು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ತಾಕೀತು ಮಾಡಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಸರ್ವೇ ಕಾರ್ಯ ಮತ್ತು ವರದಿಯನ್ನು ತಡೆ ಹಿಡಿಯಬೇಕು ಎಂದು ಕೋರಿ ಅಂಜುಮನ್ ಇಂತೇಜಾಮಿಯಾ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ ಅರ್ಜಿ ಮತ್ತು ಮಸೀದಿಯ ಅರ್ಜಿಯನ್ನು ವಜಾ ಮಾಡುವಂತೆ ಹಿಂದೂ ಸೇನೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಮಸೀದಿಯ ಪರವಾಗಿ ವಾದ ಮಂಡಿಸಿದ ಹಿರಿಯ ಅಡ್ವೋಕೇಟ್ ಹುಜೀಫಾ ಅಹಮದಿ ಅವರು ಮಸೀದಿಯನ್ನು ರಕ್ಷಣೆ ಮಾಡಬೇಕು ಎಂದು ಕೋರಿದರು. ಈ ವೇಳೆ ಕೋರ್ಟ್ ಮಸೀದಿ ಸರ್ವೇ ನಡೆಸಿದಾಗ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಉತ್ತರಪ್ರದೇಶ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಇದನ್ನು ಕೋರ್ಟ್ ನೇಮಿಸಿದ ಕಮಿಷನರ್ ಗಳೂ ನೋಡಿದ್ದಾರೆ ಎಂದು ಉತ್ತರಿಸಿದರು.

ಹಾಗಾದರೆ, ಪತ್ತೆಯಾದ ಶಿವಲಿಂಗಕ್ಕೆ ಸದ್ಯಕ್ಕೆ ರಕ್ಷಣೆ ಕೊಡಿ. ಅಲ್ಲದೇ, ಮಸೀದಿಯಲ್ಲಿ ಪ್ರಾರ್ಥನೆಗೆ ಯಾವುದೇ ರೀತಿಯ ಅಡ್ಡಿ ಉಂಟಾಗಬಾರದು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ವಿರೋಧ ವ್ಯಕ್ತಪಡಿಸಬಾರದು ಎಂದು ವಾರಾಣಸಿ ಜಿಲ್ಲಾಡಳಿತಕ್ಕೆ ಸೂಚಿಸಿದ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ(ಮೇ 19) ಮುಂದೂಡಿದೆ.

ಇನ್ನು ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯ ಮುಗಿದಿದ್ದು, ವರದಿಗಾಗಿ ಇನ್ನಷ್ಟು ಸಮಯ ನೀಡಬೇಕು ಎಂದು ಕೋರಿಕೆ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ವಾರಾಣಸಿ ಕೋರ್ಟ್ 2 ದಿನ ಕಾಲಾವಕಾಶ ನೀಡಿದೆ.