ಶೀಘ್ರವೇ ಹಿಜಾಬ್ ಪ್ರಕರಣದ ವಿಚಾರಣೆ ನಡೆಸಿ – ಸುಪ್ರೀಂಕೋರ್ಟ್​ಗೆ ವಕೀಲರ ಮನವಿ…

47
firstsuddi

ನವದೆಹಲಿ : ಹಿಜಬ್ ನಿಷೇಧದಿಂದಾಗಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರ ಪರ ವಕೀಲರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವಿಚಾರಣೆ ನಡೆಸುವ ಬಗ್ಗೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ಇಂದು ವಕೀಲ ಶಾದನ್ ಫರಾಸತ್ ಪ್ರಕರಣ ಬಗ್ಗೆ ಸಿಜೆಐ ಪೀಠದ ಮುಂದೆ ಪ್ರಸ್ತಾಪಿಸಿದರು. ದ್ವಿ ಸದಸ್ಯ ಪೀಠದಲ್ಲಿ ಭಿನ್ನ ತೀರ್ಪು ಬಂದಿದೆ. ಸರ್ಕಾರಿ ಕಾಲೇಜುಗಳಲ್ಲಿ ಹಿಜಬ್ ನಿಷೇಧದಿಂದಾಗಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಈಗಾಗಲೇ ಒಂದು ವರ್ಷವನ್ನು ವಿದ್ಯಾರ್ಥಿನಿಯರು ಕಳೆದುಕೊಂಡಿದ್ದಾರೆ. ಮಾರ್ಚ್ 9ರಿಂದ ಪರೀಕ್ಷೆಗಳು ಆರಂಭವಾಗುತ್ತಿರುವ ಹಿನ್ನೆಲೆ ಈ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಫರಾಸತ್ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ತ್ರಿ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಸುವ ಬಗ್ಗೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಿಜೆಐ ಭರವಸೆ ನೀಡಿದರು.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠವು, ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲೆ ವಿಭಜಿತ ತೀರ್ಪು ನೀಡಿತ್ತು. ವಿಭಜಿತ ತೀರ್ಪಿನ ಹಿನ್ನಲೆಯಲ್ಲಿ ಅಂದು ಇಬ್ಬರೂ ನ್ಯಾಯಾಧೀಶರು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು.