ಶೃಂಗೇರಿ ಪುರಸಭೆಯ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಒತ್ತಾಯ…

46
firstsuddi

ಚಿಕ್ಕಮಗಳೂರು: ಶೃಂಗೇರಿ ಪುರಸಭೆಯ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಬಹುಜನ ಸಮಾಜ ಪಕ್ಷ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ನಿನ್ನೆ ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ಶೃಂಗೇರಿ ಪುರಸಭೆಯಲ್ಲಿ 14 ಪೌರಕಾರ್ಮಿಕರು ನೇರ ಪಾವತಿ ದಿನಗೂಲಿ ಮತ್ತು ಹೊರಗುತ್ತಿಗೆ ಮೇಲೆ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಅವರನ್ನು ಖಾಯಂಗೊಳಿಸುವಂತೆ ಒತ್ತಾಯಿಸುತ್ತಿದ್ದರೂ, ಇದುವರೆಗೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಶೃಂಗೇರಿ ಪ್ರಸಿದ್ಧ ಕ್ಷೇತ್ರವಾಗಿದ್ದು ಪ್ರತಿ ದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗಾಗಿ, ಅಲ್ಲಿ ಹೆಚ್ಚು ಪೌರಕಾರ್ಮಿಕರ ಅವಶ್ಯಕತೆ ಇದ್ದರೂ, ಕೇವಲ ಇಬ್ಬರನ್ನು ಮಾತ್ರ ಖಾಯಂಗೊಳಿಸಲಾಗಿದೆ ಎಂದು ದೂರಿದರು.

ತಮ್ಮನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಶೃಂಗೇರಿ ಪುರಸಭೆಯ ಪೌರಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಈಗಲಾದರೂ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಅವರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಲೋಕಸಭಾ ಕ್ಷೇತ್ರದ ಸಂಯೋಜಕ ಕೆ.ಆರ್.ಗಂಗಾಧರ್, ತಾಲೂಕು ಅಧ್ಯಕ್ಷ ಕುಮಾರ್, ಅಸೆಂಬ್ಲಿ ಖಜಾಂಚಿ ರತ್ನ, ಕಚೇರಿ ಕಾರ್ಯದರ್ಶಿ ಕಲಾವತಿ ಹಾಜರಿದ್ದರು.