ನವದೆಹಲಿ : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನ ಪೊಲೀಸ್ ಕಸ್ಟಡಿ ಅವಧಿಯನ್ನು 4 ದಿನಗಳವರೆಗೆ ವಿಸ್ತರಿಸಲಾಗಿದೆ.
ಪೊಲೀಸ್ ಕಸ್ಟಡಿ ಅವಧಿ ಅಂತ್ಯವಾದ ಹಿನ್ನಲೆ ಅಫ್ತಾಬ್ ನನ್ನು ಸಾಕೇತ್ ಜಿಲ್ಲಾ ನ್ಯಾಯಲಯದ ಮುಂದೆ ಅಫ್ತಾಬ್ ನನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಅಫ್ತಾಬ್ ಜಗಳದ ಆವೇಶದಲ್ಲಿ ಹತ್ಯೆ ಮಾಡಿದ್ದೇನೆ, ಹತ್ಯೆಯ ಮಾಡಿರುವುದಕ್ಕೆ ಪಶ್ಚಾತ್ತಾಪ ಇದೆ, ಘಟನೆಯನ್ನು ನೆನಪಿಸಿಕೊಳ್ಳಲು ಬೇಸರವಿದೆ ಎಂದು ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಅಫ್ತಾಬ್ ಹೇಳಿಕೆ ಆಧರಿಸಿ ತನಿಖೆ ಮಾಡಬೇಕಿದೆ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ತನಿಖೆ ನಡೆಸಬೇಕಿದೆ. ಈ ಹಿನ್ನಲೆ ಅವಧಿ ವಿಸ್ತರಣೆ ಮಾಡಬೇಕು ಎಂದು ದೆಹಲಿ ಪೊಲೀಸರ ಪರ ವಕೀಲರು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಕೋರ್ಟ್ ನಾಲ್ಕು ದಿನಕ್ಕೆ ಕಸ್ಟಡಿಯನ್ನು ವಿಸ್ತರಿಸಿ ಆದೇಶ ನೀಡಿದೆ.
ಈ ನಡುವೆ ಅಫ್ತಾಬ್ ನ ಮಂಪರು ಪರೀಕ್ಷೆ ಮಾಡಲು ಪೊಲೀಸರು ತಯಾರಿ ನಡೆಸಿದ್ದು, ಅದಕ್ಕೂ ಮೊದಲು ಫಾಲಿಗ್ರಾಫ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇಂದು ಅಫ್ತಾಬ್ ಫಾಲಿಗ್ರಾಫ್ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.










