ಬೆಂಗಳೂರು : ಹಿಜಾಬ್ ಕುರಿತಾಗಿ ಮಾತನಾಡುವಾಗ ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ ಎಂಬ ಆರೋಪ ಸಿದ್ದರಾಮಯ್ಯ ಅವರ ಮೇಲೆ ಕೇಳಿ ಬಂದಿದೆ. ಇದರ ವಿರುದ್ಧ ಬಿಜೆಪಿ ಸಾಲು, ಸಾಲು ಟ್ವೀಟ್ ಮಾಡುವ ಮೂಲಕ ಟೀಕಿಸಿದೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತಿದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಧೋರಣೆ. ಈ ಹಿಂದೆ ಹಲವು ಮಠಾಧೀಶರ ವಿರುದ್ಧ ಅಗೌರವಯುತವಾಗಿ ನಡೆದುಕೊಂಡಿದ್ದ ಸಿದ್ದರಾಮಯ್ಯ ಅವರು ಈಗ ಸ್ವಾಮೀಜಿಗಳ ಮೌನವನ್ನೂ ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ.
ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಹಿಂದೆಯೂ ಕೂಡ ಅವರು ವೀರಶೈವ ಲಿಂಗಾಯತ ಸ್ವಾಮೀಜಿಗಳ ಹೆಸರನ್ನು ತಮ್ಮ ಮತ ರಾಜಕಾರಣಕ್ಕೆ ಬಳಸಿಕೊಳ್ಳುವ ವಿಫಲ ಯತ್ನ ನಡೆಸಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಸ್ವಾಮೀಜಿಗಳೇ ಮನವಿ ನೀಡಿದ್ದರು ಎಂಬ ಸುಳ್ಳು ಹೇಳಿಕೆಯನ್ನು ರಾಜ್ಯದ ಜನ ಮರೆತಿಲ್ಲ.
ಬಿಎಸ್‌ವೈ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಠ-ಮಂದಿರಗಳಿಗೆ ಉದಾರ ನೆರವು ನೀಡಿದ್ದರು. ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂದು ವಾದಿಸುವ ಸಿದ್ದರಾಮಯ್ಯನವರಿಗೆ ಹಿಂದೂಗಳನ್ನು ವಿರೋಧಿಸಲು ಯಾವ ಕಾನೂನು ಅಡ್ಡಿ ಬರುವುದಿಲ್ಲ ಎಂದು ಟೀಕಿಸಿದೆ.










