ಸಂವಿಧಾನ ಉಳಿಸಲು ಪ್ರತಿಯೊಬ್ಬರೂ ಅಂಬೇಡ್ಕರ್ ಆಗಬೇಕಿದೆ!…

567
firstsuddi

– ಡಾ.ಎಂ.ಎಸ್.ಮಣಿ 

ಅದು 2019 ಮೇ 12. ಬೆಳಗಿನಿಂದ ಸಡಗರ, ಸಂಭ್ರಮ, ಪುಳಕ ಮನೆ ಮಾಡಿತ್ತು. ನಾವಂದು ದೇಶದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿದ್ದೇವೆ ಎಂಬ ಹೆಮ್ಮೆಯ ಗರಿ ಮೂಡಿತ್ತು. ನಾವುಗಳು ಇಷ್ಟೊಂದು ಸಂತಸ, ಸಂತೃಪ್ತಿ ಪಡಲು ಕಾರಣ, ಅಂದು ಬುಡಕಟ್ಟು ವರ್ಗಗಳ ಪಾಲಿನ ವಿಮೋಚಕ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ಡಾ.ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದೆವು. ಇಷ್ಟೇನಾ, ಇಷ್ಟಕ್ಕೆ, ಇಷ್ಟೊಂದು ಪೀಠಿಕೆಯೇ? ಹಿಂದೆಂದೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸರಲಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಎದ್ದಿರಲೂಬಹುದು. 

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಪ್ರತಿವರ್ಷ ಸರ್ಕಾರ , ಸಂಘಸಂಸ್ಥೆಗಳು ಅದ್ದೂರಿಯಾಗಿ ನಡೆಸಿಕೊಂಡು ಬಂದಿವೆ. ಮಾನ್ಯತೆ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಪಾದಕರ ಸಂಘ ಕೂಡ ನಡೆಸಿದೆ. ಆದರೆ, ಮೀಸಲಾತಿ ಸವಿಯುವ ಪತ್ರಕರ್ತರು ಕೂಡ ಇದುವರೆಗೂ ಬಾಬಾ ಸಾಹೇಬರ ಸ್ಮರಣೆಯನ್ನು ಮಾಡಿರಲೇ ಇಲ್ಲ. ಇಂತಹದ್ದೊಂದು ಅಸಡ್ಡೆಯಲ್ಲಿಯೇ ನಾವುಗಳು 72 ವರ್ಷಗಳನ್ನು ಕಳೆದಿದ್ದೇವೆ ಎಂದು ನೆನಪಿಸಿಕೊಂಡರೆ, ಮುಜುಗರ, ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ.ಸಿದ್ದರಾಜು, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ, ಜಿ.ಕೆ.ಸತ್ಯ, ಐ.ಎಚ್.ಸಂಗಮದೇವ, ಗಂಗಾಧರ ಮೊದಲಿಯಾರ್ ಅವರುಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕುರಿತಂತೆ ಅಭಿಪ್ರಾಯ ಕೇಳಿ, ಅನಿವಾರ್ಯತೆ ಕುರಿತು ಚರ್ಚಿಸಿದೆ. ಹಾಗೆಯೇ ಏಇಖಂ ಅಧ್ಯಕ್ಷರಾದ ಕಲಾವಿದ ವಿಷ್ಣು, ಮಂಜುನಾಥ್ ಬೊಮ್ಮನಕಟ್ಟಿ, ಸತೀಶ್, ಮುನಿರಾಜು, ಮಿಂಚು ಶ್ರೀನಿವಾಸ್, ಮುನಿನಾರಾಯಣಪ್ಪ, ಶ್ರೀಮತಿ ಅಕ್ಕಯಮ್ಮ ಮುನಿಯಪ್ಪ, ರಾಮೇಗೌಡ, ಟಿ.ನಾಗರಾಜ್ ಅವರುಗಳು ನನ್ನೊಂದಿಗೆ ಟೊಂಕಕಟ್ಟಿ ನಿಂತರು. ಇನ್ನೊಂದು ವಿಶೇಷ ಏನೆಂದರೆ, ಕಾರ್ಯಕ್ರಮದ ವೆಚ್ಚವನ್ನು ಪತ್ರಕರ್ತರೇ ಭರಿಸಿದ್ದರು. ಇಲ್ಲಿನ ರಾಜಕಾರಣಿಗಳೇ ನಮಗಿಂತ ವಾಸಿ. ದೇಶ ಸ್ವಾತಂತ್ರ್ಯ ಕಂಡ 43ನೇ ವರ್ಷಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ಪುರಸ್ಕಾರ ಕೊಡಲಾಗಿದೆ. ಇಂತಹದ್ದೊಂದು ಇತಿಹಾಸ ಸೃಷ್ಠಿಸಲು ಹಿಂದುಳಿದ ವರ್ಗಗಳ ಐಕಾನ್ ವಿ.ಪಿ.ಸಿಂಗ್ ಪ್ರಧಾನಿ ಆಗಬೇಕಾಯಿತು. ಇಂತಹದ್ದೇ ಹೆಗ್ಗಳಿಕೆಗೆ ಸಹೋದರ ವೆಂಕಟಸಿಂಗ್ ಕೂಡ ಒಳಗಾಗಬೇಕೆಂಬ ಆಸೆ ಇತ್ತು. 

ಅಂದಿನ ಕಾರ್ಯಕ್ರಮದಲ್ಲಿ ನಾನು ಕೂಡ ಮಾತನಾಡಿದ್ದೆ. ಬಾಬಾ ಸಾಹೇಬರ ಮೂಲತತ್ವ ವ್ಯವಸ್ಥೆಯನ್ನು ಬದಲಾಯಿಸುವುದಾಗಿತ್ತು. ಜೊತೆಗೆ ಜನ ಸಾಮಾನ್ಯರಿಗೆ ರಾಜಕೀಯ ಸ್ವಾತಂತ್ರ್ಯ ಸಿಗಬೇಕೆಂದು ಆಗಿತ್ತು. ಇಂದಿಗೂ ಬಹುಸಂಖ್ಯಾತ ಜನರ ಪಾಲಿಗೆ ಮರೀಚಿಕೆಯಾಗುಳಿದಿದೆ. ಹೀಗಾಗಿ ಮತ್ತೊಬ್ಬ ಅಂಬೇಡ್ಕರ್ ಹುಟ್ಟಿ ಬರಲಿ ಎನ್ನುವುದಕ್ಕಿಂತ ವೇದಿಕೆ ಮೇಲಿರುವವರು, ವೇದಿಕೆಯ ಕೆಳಗಿರುವವರೆಲ್ಲರೂ ಡಾ.ಬಿ.ಆರ್.ಅಂಬೇಡ್ಕರ್ ಆಗಬೇಕಿದೆ. ಇಂತಹ ಅನಿವಾರ್ಯತೆಯೂ ಇದೆ. ಇದನ್ನೇಕೆ ಹೇಳಬೇಕಾಯಿತೆಂದರೆ, ಕಳೆದ ಐದು ವರ್ಷಗಳಲ್ಲಿ ದೇಶದ ರಾಜಧಾನಿ ಮನುಷ್ಯರ ರಾಜಧಾನಿ ಆಗಲಿಲ್ಲ. ಗೋವಿನಂತಹ ಪ್ರಾಣಿಗಳ ರಕ್ಷಣೆ ಮಾಡುವ ರಾಜಧಾನಿ ಆಯಿತು. ಬಡವರ ಅಭ್ಯುದಯಕ್ಕಾಗಿ ಚಿಂತಿಸಬೇಕಾದ ಪಾರ್ಲಿಮೆಂಟು, ಬಂಡವಾಳಶಾಹಿಗಳ ಹಿತಾಸಕ್ತಿ ಕಾಪಾಡುವ ಕೇಂದ್ರವಾಯಿತೆಂಬ ಧಾಟಿಯಲ್ಲಿ ನನ್ನ ಭಾಷಣ ಸಾಗಿತ್ತು. ವಿಜಯಪುರ ದಾಟಿ ಯಲಹಂಕ ಮೇಲ್ಸೇತುವೆ ದಾಟುತ್ತಿರುವಾಗ ಗೆಳೆಯ ಮಿಂಚು ಶ್ರೀನಿವಾಸ್ ಕರೆ ಮಾಡಿ, ಯಾಕ್ ಸಾರ್, ನೀವು ಸರಿಯಾಗಿ ಮಾತನಾಡಲಿಲ್ಲ. ವೆಂಕಟ್ ಸಿಂಗ್ ಬರಲಿಲ್ಲವೆಂದು ಬೇಸರವೇ? ಎಂದು ಪ್ರಶ್ನೆ ಎಸೆದರು. ನನಗೋ ಸಂಭಧವಿಲ್ಲದ ವಿಚಾರ ಏನಾದರೂ ಅರುಹಿಬಿಟ್ಟನೇ? ಎಂಬ ಚಿಂತೆ ಹತ್ತಿತು. ಇಷ್ಟಕ್ಕೂ ಮಿಂಚು ಶ್ರೀನಿವಾಸ್ ನನ್ನ ಮುಖಭಾವಗಳನ್ನು ಇತರರಿಗಿಂತ ಬಹುಬೇಗ ಗುರುತಿಸಬಲ್ಲರು. ಹೌದು, ಅಂದಿನ ಕಾರ್ಯಕ್ರಮಕ್ಕೆ ವೆಂಕಟಸಿಂಗ್, ಅಭಿಮನ್ಯು ರಮೇಶ್. ಶಿವರಾಜ್ ಬರಲಿಲ್ಲ ಎಂಬ ಕೊರಗು ಕಾಡುತ್ತಿತ್ತು. ಆದರೂ, ನಾನು ಹೇಳಬೇಕಾದುದ್ದನ್ನು ಅತ್ಯಂತ ಸೂಕ್ಷ್ಮವಾಗಿ ಹೇಳಿದ್ದೆ. ನನ್ನ ಧ್ವನಿ ಪೆಟ್ಟಿಗೆಯ ಶಕ್ತಿಯ ಕಾರಣಕ್ಕೋ ಅಥವಾ ಯಾವುದೇ ಸ್ಥಾನಮಾನ ಹೊಂದದೇ ಆಡಿದ ಮಾತುಗಳು ಮಹತ್ವ ಪಡೆದಿರಲಿಕ್ಕಿಲ್ಲ ಎನಿಸುತ್ತದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸಿದ್ದರಾಜು,  ಒಕ್ಕೂಟದ ಉಪಾಧ್ಯಕ್ಷ ಜಿ.ಕೆ.ಸತ್ಯ, ಹಿರಿಯ ಪತ್ರಕರ್ತರಾದ ಲಕ್ಷ್ಮಣ ಕೊಡಸೆ, ಸಿ.ಮುನಿಯಪ್ಪ ಅವರುಗಳು ನೀಡಿದ ಸಂದೇಶವನ್ನಿಲ್ಲಿ ಹಿಡಿದಿಟ್ಟಿರುವೆ. 

 18ನೇ ಶತಮಾನದಲ್ಲಿ ‘ಅಸ್ಪøಶ್ಯತೆ’ ಎಂಬ ಸಾಮಾಜಿಕ ಅನಿಷ್ಠ ಅತ್ಯಂತ ದಟ್ಟವಾಗಿತ್ತು. ಇದನ್ನು ತೊಡೆದುಹಾಕಲೆಂಬಂತೆ 18ನೇ ಶತಮಾನದ ಅಂತ್ಯದಲ್ಲಿ ಅಂದರೆ 1891 ಏಪ್ರಿಲ್ 14 ರಂದು ಡಾ.ಭೀಮರಾವ್ ರಾಮಜಿ ಅಂಬೇಡ್ಕರ್ ಮಹಾರ್ ಜನಾಂಗದಲ್ಲಿ ಜನಿಸಿದರು. ಇವರ ತಂದೆ ಸುಬೇದಾರ್ ಮೇಜರ್ ರಾಮ್‍ಜಿ ಸಕ್ಪಾಲ್, ತಾಯಿ ಭೀಮಾಬಾಯಿ ಆಗಿದ್ದರು. ಸೈನಿಕರ ಮನೆಯಲ್ಲಿ ಜನಿಸಿದರೂ, ಜಾತೀಯತೆಯ ತೀವ್ರತೆಗೆ ತುತ್ತಾಗಬೇಕಾಯಿತು. ಕಲಿಕೆಯ ಕಾಲದಲ್ಲಿ ತರಗತಿ ಹೊರಗೆ ಕೂತು ಕಲಿಯಬೇಕಾಯಿತು. ನೀರಿನ ದಾಹವಾದರೂ, ಹನಿ ನೀರನ್ನು ಕಾಣದೆ ಪಾಠ ಪ್ರವಚನಗಳನ್ನು ದೂರದ ನೆಲದ ಮೇಲೆ ಕುಳಿತು ಕೇಳಬೇಕಾಗಿತ್ತು. ಮೇಲ್ವರ್ಗದ ವಿದ್ಯಾರ್ಥಿಗಳು ಶಾಲೆಯ ಕಪ್ಪು ಹಲಗೆಯ ಹಿಂದೆ ಊಟದ ಡಬ್ಬಿ ಇಡುತ್ತಿದ್ದರಿಂದ, ಅಂಬೇಡ್ಕರ್ ಕಪ್ಪು ಹಲಗೆಯನ್ನು ಮುಟ್ಟುವಂತಿರಲಿಲ್ಲ. ಕಾರಣ ಕಪ್ಪು ಹಲಗೆಯ ಮೇಲೆ ಅಂಬೇಡ್ಕರ್, ಬಳಪದಿಂದ ಬರೆದರೆ ಹಿಂದಿರುವ ಊಟ ಅಪವಿತ್ರಗೊಳ್ಳುತ್ತದೆ ಎಂಬ ಭಾವನೆ ಇತ್ತು. ಇದ್ಯಾವುದರಿಂದಲೂ ಧೃತಿಗೆಡದ ಅಂಬೇಡ್ಕರ್ ದಿನಕ್ಕೆ 18 ಗಂಟೆಗಳ ಅಧ್ಯಯನ ಮಾಡುತ್ತಿದ್ದರು. 

ಮಹರ್ ಜನಾಂಗದಲ್ಲಿ ಹುಟ್ಟಿ ಅಂದಿನ ಈ.ಂ ಪರೀಕ್ಷೆಯನ್ನು ಪಾಸು ಮಾಡಿ ಹೊಸ ಇತಿಹಾಸ ಬರೆದರು. ಇವರ ಬಡತನ ಮತ್ತು ಓದುವ ಬಯಕೆಯನ್ನು ಗುರ್ತಿಸಿ ಕರ್ಲೋಸ್ಕರ್ ಮೇಷ್ಟ್ರು ಅಂದಿನ ಬರೋಡಾದ ಮಹಾರಾಜ ಸಿಯಾಜಿ ಗಾಯಕ್‍ವಾಡ್ ಮುಂದೆ ಕರೆದೊಯ್ದು ನಿಲ್ಲಿಸಿದರು. ಮಹಾರಾಜ ಸಿಯಾಜಿ ಗಾಯಕ್‍ವಾಡ್ ಅವರ ಪ್ರಶ್ನೆಗಳಿಗೆ ಅಂಬೇಡ್ಕರ್ ಉತ್ತರ ನೀಡಿ ಅವರ ಮನ ಗೆದ್ದರು. ಆಗ ಮಾಸಿಕ 25 ರೂಗಳ ವಿದ್ಯಾರ್ಥಿವೇತನ ಮಂಜೂರಾಯಿತು. ಇದಾದ ನಂತರವೂ ಬರೋಡಾದ ಮಹಾರಾಜರು ವಿದ್ಯಾರ್ಥಿವೇತನ ಕೊಟ್ಟು ಅಮೆರಿಕಾದ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಕಳುಹಿಸಿಕೊಟ್ಟರು. ಇದರ ಸದುಪಯೋಗ ಪಡೆದು ಡಾ.ಬಿ.ಆರ್. ಅಂಬೇಡ್ಕರ್ ಅಮೆರಿಕಾ ಮತ್ತು ಇಂಗ್ಲೆಂಡಿನಲ್ಲಿ ಎಂ.ಎ;ಪಿಹೆಚ್‍ಡಿ; ಡಿ.ಲಿಟ್; ಡಿ.ಎಸ್.ಸಿ, ಬಾರ್ ಅಟ್ ಲಾ; ಎಲ್‍ಎಲ್‍ಡಿ ಪದವಿಗಳನ್ನು ಗಳಿಸಿದರು. 

ವಿಶ್ವದ ಶ್ರೇಷ್ಠ ಸುಧಾರಕರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೂಡ ಒಬ್ಬರಾಗಿದ್ದಾರೆ. ಅಂದರೆ, ಮಹಾತ್ಮ ಗಾಂಧಿಯಂತೆ ರಾಷ್ಟ್ರಪಿತ ಬಿರುದಿಗೆ ಒಳಗಾಗಿಲ್ಲ. ಬದಲಿಗೆ ಬುದ್ಧ, ಬಸವ, ಕನಕರಂತಹ ದಾರ್ಶನಿಕರ ಸಾಲಿನಲ್ಲಿ ಎದ್ದು ಕಾಣುತ್ತಾರೆ. ಅಕ್ಷರದ ಅರಿವೇ ಇಲ್ಲದೆ, ಪಶು-ಪಕ್ಷಿಯಂತೆ ಕುಲಕಸುಬುಗಳಲ್ಲಿ ಬದುಕು ಮಾಡುತ್ತಿದ್ದವರೆಲ್ಲರ ಪರ ಏಕಾಂಗಿಯಾಗಿ ಹೋರಾಡಿ, ಗೆದ್ದರು. ಮೀಸಲಾತಿಯ ಫಲ ಬಡಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮಹಾತ್ಮರಿಗಿಂತ ಶ್ರೇಷ್ಠರೆಂದೇ ಕರೆಯಬೇಕು. ‘ವರ್ಣಾಶ್ರಮ’ ದ ಬಂಧೀಖಾನೆಯಲ್ಲಿ ಸಿಲುಕಿದ್ದ ಬುಡಕಟ್ಟು ವರ್ಗಗಳಲ್ಲಿ ಸ್ವಾಭಿಮಾನ, ಇಚ್ಛಾಶಕ್ತಿ, ಸಾಕ್ಷಿಪ್ರಜ್ಞೆಯನ್ನು ಬಿತ್ತಿ ಬೆಳೆಸಿದ್ದಾರೆ. ಇವರು ಬುಡಕಟ್ಟು ವರ್ಗಗಳಿಗೆ ಮಾತ್ರವಲ್ಲ, ದೇಶದ ಎಲ್ಲಾ ವರ್ಗದ ಜನರ ಹಿತಾಸಕ್ತಿಯನ್ನು ಅದರಲ್ಲೂ ಮಹಿಳೆಯರ ಹಿತಾಸಕ್ತಿಯನ್ನು ಕಾಪಾಡಿದ್ದರು. 

ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದೂ ಧರ್ಮದೊಳಗಿರುವ ಸಾಮಾಜಿಕ ಭಿನ್ನಾಭಿಪ್ರಾಯ, ತಾರತಮ್ಯ, ಅಸಮಾನತೆಯ ವಿರುದ್ಧ ಹೋರಾಟ ಮಾಡಿದ್ದರು. ಕುಲಕಸುಬು ಆಧಾರಿತ ವರ್ಗವನ್ನು ಸಮಾಜದ ಮುಖ್ಯವಾಹಿನಿಯಿಂದ ದೂರ ಇಟ್ಟು, ಜಾತೀಯತೆಯನ್ನು ಪೋಷಿಸಲಾಗುತ್ತಿತ್ತು. ಅಂಬೇಡ್ಕರ್ ಅವರ ಚಿಂತನೆಯನ್ನು ಅವರು ಅನುಸರಿಸುತ್ತಾ ಬಂದ ರಾಜಕೀಯ ತತ್ವ, ಸಾಮಾಜಿಕ ನಡವಳಿಕೆ, ರಾಜಕೀಯ ಚಿಂತನೆಗಳಲ್ಲಿ ಕಾಣಬಹುದಾಗಿತ್ತು. ಇವರೆಂದಿಗೂ ತತ್ವಜ್ಞಾನಿಗಳಂತೆ ಕಟುವಾಗಿಯೂ, ಮಡಿವಂತಿಕೆಯ ಸಮುದಾಯವಾದಿಯಾಗಿಯೂ ಆಗಿರಲೇ ಇಲ್ಲ. 

ಅಂಬೇಡ್ಕರ್ ಅವರು ರಾಜಕಾರಣ ಕ್ಷೇತ್ರ ಪ್ರವೇಶಿಸಿದ ನಂತರ, ಮರಾಠಿ ಭಾಷೆಯಲ್ಲಿ ಪತ್ರಿಕೆಯನ್ನು ಆರಂಭಿಸಿದರು. ಆಗಿನ್ನೂ ಮಹಾತ್ಮಗಾಂಧೀಜಿ ‘ಹರಿಜನ’ ಪತ್ರಿಕೆ ಆರಂಭಿಸಿರಲಿಲ್ಲ. ಇವರು ಲಂಡನ್‍ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಬುಡಕಟ್ಟು ವರ್ಗಗಳ ಪರ ಭಾಗವಹಿಸಿದ್ದರು. ಹಿಂದೂಗಳಿಗಿಂತ ಇವರೆಷ್ಟು ಭಿನ್ನರೆಂಬುದನ್ನು ಮನವರಿಕೆ ಮಾಡಿಕೊಟ್ಟರು. ಇದರಿಂದಾಗಿ ಆಂಗ್ಲ ಸರ್ಕಾರ ‘ಕಮ್ಯೂನಲ್ ಅವಾರ್ಡ್’ನ್ನು ಘೋಷಿಸಿತು. ಮಹಾತ್ಮಗಾಂಧಿ ಉಪವಾಸ ಕುಳಿತ ಪರಿಣಾಮ ‘ ಕಮ್ಯೂನಲ್ ಅವಾರ್ಡ’ನ್ನು ಹಿಂಪಡೆಯಲಾಯಿತು. ನಂತರ ಆಗಿದ್ದೇ 1932 ಪೂನಾ ಒಪ್ಪಂದ. ತದನಂತರ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಮತ್ತು ಷೆಡ್ಯೂಲ್ ಕಾಸ್ಟ್ ಫೆಡೇಷನ್‍ಗಳನ್ನು ಸ್ಥಾಪಿಸಿದರು. ಇದರಡಿ ಸ್ಪರ್ಧಿಸಿ ಕೆಲವು ಕ್ಷೇತ್ರಗಳನ್ನು ಗೆದ್ದರು. 1942-46 ರಲ್ಲಿ ವೈಸ್‍ರಾಯ್ ಕಾರ್ಯಕಾರಿ ಸಮಿತಿಯನ್ನು ‘ಕಾರ್ಮಿಕ ಸದಸ್ಯ’ರಾಗಿ ಪ್ರತಿನಿಧಿಸಿದ್ದರು. ಇಂತಹ ಮಹತ್ವದ ಸ್ಥಾನ ಪಡೆದ ಮೊದಲ ಭಾರತೀಯ ಕೂಡ ಆಗಿದ್ದರು. ದೇಶದ ಕಾನೂನು ಮಂತ್ರಿಯಾಗಿ, ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ನಮ್ಮ ದೇಶದ ಅವಕಾಶ ವಂಚಿತರು ಮಾತ್ರವಲ್ಲದೆ, ಜಗತ್ತಿನಾದ್ಯಂತ ನೋವಿನಲ್ಲಿಯೇ ಹುಟ್ಟಿ, ನೋವಿನಲ್ಲಿಯೇ ಜೀವ ಬಿಡುತ್ತಿದ್ದ ಅಸಂಖ್ಯಾತ ಜನರ ಪಾಲಿಗೆ ವಿಮೋಚಕರಾಗಿದ್ದರು. ಇವರ ಎಡೆಬಿಡದ ಸಮಾಜ ಸೇವೆಯಿಂದ ತಮ್ಮ ಮೂರು ಗಂಡು ಮತ್ತು ಓರ್ವ ಹೆಣ್ಣು ಮಗಳನ್ನು ಕಳೆದುಕೊಂಡರು. ಇದರಿಂದ ಖಿನ್ನರಾಗದೆ, ಅಂಧಕಾರದಲ್ಲಿ ಮುಳುಗಿದ್ದ ಬುಡಕಟ್ಟು ವರ್ಗಗಳ ಜನರಲ್ಲಿ ಬೆಳಕು ಮೂಡಿಸಲು ಶ್ರಮಿಸಿದ್ದರು. ಬಾಬಾ ಸಾಹೇಬರ ನಿಸ್ವಾರ್ಥ ಸೇವೆಯನ್ನು ಅರ್ಥ ಮಾಡಿಕೊಂಡವರು ಅವರನ್ನು ದೇವರೆಂದು, ವಿಮೋಚಕನೆಂದು ಕೊಂಡಾಡಿದರು. ಬುಡಕಟ್ಟು ಜನರ ಸೇವೆ ತಪ್ಪಿಹೋಗುವುದೆಂದು ಹಿತಾಸಕ್ತಿಗಳು ಅಂಬೇಡ್ಕರ್ ಅವರನ್ನು ಹೀಯ್ಯಾಳಿಸಿದರು. ಇವರೊಂದಿಗೆ ಮೀಸಲಾತಿಯ ಫಲ ಗಳಿಸಿದವರು ಕೂ ಸೇರಿಕೊಂಡು ಮೂಡರಂತೆ ಟೀಕಿಸಿದರು. ಇಂದಿಗೂ ಅವೆಷ್ಟೋ ಸೋಕಾಲ್ಡ್ ಸಮುದಾಯದ ಜನರಿಗೆ ನಾವು ಹಿಂದುಳಿದವರೆಂದು, ಪರಿಶಿಷ್ಟ ವರ್ಗದವರೆಂದು, ನಮಗೆ ಮೀಸಲಾತಿ ಇದೆ ಎಂಬುದನ್ನು ಅರಿಯದವರಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳ ವಿವಿಧ ಅಂಶಗಳನ್ನು ಚರ್ಚಿಸುವಾಗ ಮಹಾತ್ಮ ಗಾಂಧಿಯೊಂದಿಗಿನ ಸಂವಾದವನ್ನು ಉಲ್ಲೇಖಿಸದಿದ್ದಲ್ಲಿ ಲೇಖನ ಅಪೂರ್ಣವಾಗುತ್ತದೆ. ಅಂದು ಮಹಾತ್ಮ ಗಾಂಧಿ ಒಬ್ಬರೇ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದು ಆಗಿದ್ದರು. ಆಗ ಬದಲಿ ಆಯಾಮ ಬಂದಿದೆ ಎಂದು ಅಂಬೇಡ್ಕರ್ ತೋರಿಸಿಕೊಟ್ಟರು. ಮಹಾತ್ವ ಗಾಂಧಿಯವರೊಡನೆ ಚರ್ಚಿಸುವ ಸಂದರ್ಭಗಳಲ್ಲಿ ‘ಅಸ್ಪøಶ್ಯತೆ’ ಕೊನೆಗಾಣಿಸಲು ವಾದಿಸುತ್ತಲೇ ಇದ್ದರು. ಇಂತಹದ್ದೊಂದು ಕಾರ್ಯ ಆಂಗ್ಲರು ಭಾರತ ಬಿಟ್ಟು ಹೊರಹೋಗುವ ಮೊದಲೇ ಆಗಬೇಕೆಂದು ಬಯಸಿದ್ದರು. ಆದರೆ, ಮಹಾತ್ಮಗಾಂಧಿಯವರಿಗೆ ಆಂಗ್ಲರನ್ನು ದೇಶದಿಂದ ಹೊರಗಟ್ಟಬೇಕೆಂಬ ಭಾವನೆ ಮಾತ್ರ ಇತ್ತು.

ಹಿಂದೂ ಧರ್ಮದೊಳಗಿದ್ದ ‘ಅಸ್ಪøಶ್ಯತೆ’ಯ ರೋಗಕ್ಕೆ ಚಿಕಿತ್ಸೆ ನೀಡದೆ, ಕೇವಲ ತೋರಿಕೆಯ ಸಹಾನುಭೂತಿ ತೋರಿಸಲಾಗುತ್ತಿದೆ. ಉಪಯೋಗಕ್ಕೆ ಬಾರದ ‘ಅಸ್ಪøಶ್ಯತಾ’ ನಿವಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಂಬೇಡ್ಕರ್ ಅಸಮಾಧಾನಗೊಂಡಿದ್ದರು. ‘ಅಸ್ಪøಶ್ಯತೆ’ ನಿವಾರಣೆಗೆ ಮಹಾತ್ಮಗಾಂಧಿ ಹಿಂದೂ ಧರ್ಮದ ಬಗ್ಗೆ ಹೊಂದಿರುವ ‘ವಿಧೇಯತೆ’ ಕಂಠಕವಾಗಿದೆ ಎಂದು ಅರಿತಿದ್ದರು. ಭಾರತದ ಗ್ರಾಮಗಳು, ಸಾಮಾಜಿಕ, ರಾಜಕೀಯ, ಆರ್ಥಿಕ ವಿವರಣಾತ್ಮಕವನ್ನು ಹೊಂದಿದೆ ಎಂದು ರಾಷ್ಟ್ರಪಿತ ಪ್ರಶಂಸೆ ವ್ಯಕ್ತಪಡಿಸಿದ್ದರು. ಭಾರತದ ಗ್ರಾಮಗಳು ವಸಾಹತುಶಾಹಿಯ ಮತ್ತೊಂದು ರೂಪವೆಂದು, ಹಿಂದುಳಿದ, ದಲಿತರನ್ನು ಶೋಷಿಸುವ ಕೇಂದ್ರಗಳೆಂದು ಬಿ.ಆರ್.ಅಂಬೇಡ್ಕರ್ ಭಾವಿಸಿದ್ದರು.

ಹಿಂದೆ ಅಸ್ಪøಶ್ಯರಿಗೆ ಯಾವುದೇ  ಹಕ್ಕುಗಳಿರಲಿಲ್ಲ. ಭಾರತೀಯ ಸಮಾಜದಲ್ಲಿ ಕಟ್ಟಕಡೆಯ ಕೆಲಸಗಳನ್ನು ಮಾಡುತ್ತಿದ್ದರು. ಇವರುಗಳು ಗ್ರಾಮದ ಹೊರಗಡೆಯೇ ಇದ್ದದ್ದರಿಂದ ಗ್ರಾಮ ಗಣತಂತ್ರ ವ್ಯವಸ್ಥೆಯಡಿ ದಶಕಗಳ ಕಾಲ ಬರಲೇ ಇಲ್ಲ. ಕಾಡು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅಂದು ಮಹಾತ್ಮಗಾಂಧಿ ಮನಸ್ಸು ಮಾಡಿದ್ದರೆ ಅಸ್ಪøರ್ಶಯತೆಯನ್ನು ನಿವಾರಿಸಬಹುದಿತ್ತು. ಆದರೆ ಮಹಾತ್ಮಗಾಂಧಿಯವರು ಪ್ರಯತ್ನಿಸಲೇ ಇಲ್ಲ ಎಂಬ ಕೊರಗು ಅಂಬೇಡ್ಕರ್ ಅವರಲ್ಲಿತ್ತು. ಎರಡು ಪ್ರಬಲ ಅಸ್ತ್ರಗಳು ಮಹಾತ್ಮ ಗಾಂಧಿ ಬಳಿ ಇದ್ದವು. ಇವನ್ನು ಪ್ರಯೋಗಿಸಿಯೇ ಆಂಗ್ಲರನ್ನು ಹೊರಗಟ್ಟಲಾಗಿತ್ತು. ಅಸ್ಪøಶ್ಯತೆ ಅವು ‘ಸತ್ಯಾಗ್ರಹ’ ಮತ್ತು ‘ಉಪವಾಸ’ ಆಗಿದ್ದವು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧಿಜಿ 21 ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದರು. ಇದರಲ್ಲಿ ಒಂದೇ ಒಂದನ್ನು ಅಸ್ಪøರ್ಶಯತೆ ನಿವಾರಣೆಗೆ ಬಳಸಿಲ್ಲ ಎಂದು ಅಂಬೇಡ್ಕರ್ ವಿಷಾದ ವ್ಯಕ್ತಪಡಿಸಿದ್ದರು. ಗ್ರಾಮದ ಬಾವಿಯಲ್ಲಿ ನೀರು, ದೇಗುಲದೊಳಗಡೆ ಪ್ರವೇಶ ಕೊಡಿಸಲು ಒಂದು ಸತ್ಯಾಗ್ರಹ ಮಾಡಲಿಲ್ಲ ಎಂದು ನೋವಿನಿಂದಲೂ ಹೇಳಿಕೊಂಡಿದ್ದರು.

ಹಿಂದೂ ಸಂಪ್ರದಾಯ ಅಸ್ಪøಷ್ಯರನ್ನು ಮಾತ್ರವಲ್ಲ, ಬುಡಕಟ್ಟು ವರ್ಗಗಳನ್ನು ವಿಘಟಿಸುತ್ತದೆ ಇದು ಸಾಮಾಜಿಕ ಪ್ರತ್ಯೇಕತೆ ಅಲ್ಲ. ಬದಲಿಗೆ ಪ್ರಾದೇಶಿಕ ಪ್ರತ್ಯೇಕತೆ ಆಗಿದೆ. ಹೀಗಾಗಿಯೇ ಅಂಬೇಡ್ಕರ್ ಬುಡಕಟ್ಟು ವರ್ಗದವರಿಗೆ, ದಲಿತರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಭಾರತೀಯ ಕಾಂಗ್ರೆಸ್ ಪಕ್ಷ ಕೂಡ ಇದನ್ನು ಒಪ್ಪಿಕೊಂಡಿತ್ತು. ಕಾರಣ, ಅಂದು ಸಾರ್ವತ್ರಿಕ ಮತದಾನ ಪದ್ಧತಿ ಇರಲಿಲ್ಲ. ಅಲ್ಲದೆ ಮತದಾನದಲ್ಲಿ ಭಾಗವಹಿಸುವವರು ಆಸ್ತಿ ಹೊಂದಿರಬೇಕಿತ್ತು. ಜೊತೆಗೆ ವಿದ್ಯಾರ್ಹತೆಯನ್ನು ಹೊಂದಿರಬೇಕಿತ್ತು. ಇವೆರಡೂ ಅರ್ಹತೆ ಹೊಂದಿಲ್ಲದ ಬಹುಸಂಖ್ಯಾತ ಜನ ದೇಶದ ನೀತಿ ನಿರೂಪಣೆ ರೂಪಿಸುವ ಕಾರ್ಯದಿಂದ ದೂರ ಉಳಿಯಬೇಕಿತ್ತು. ಇವರು ದೇಶದ ಮುಖ್ಯವಾಹಿನಿಯಿಂದ ಹೊರ ಉಳಿದರೆ ಅಪಾಯ ಸೃಷ್ಠಿಯಾಗುತ್ತದೆ. ಇದಾಗಬಾರದೆಂದರೆ, ಅವಕಾಶ ವಂಚಿತ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕಿತ್ತು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಮತದಾನಕ್ಕೆ ಅವಕಾಶ ನೀಡಬೇಕಿತ್ತು.

ಅಸ್ಪøಶ್ಯರು, ಬುಡಕಟ್ಟು ವರ್ಗದ ಜನ ಹಿಂದೂ ಸಂಪ್ರದಾಯದ ಭಾಗವಾಗಿದ್ದಾರೆ. ಹೀಗಾಗಿ ಪ್ರತ್ಯೇಕ ಮತದಾನ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಮಹಾತ್ಮಗಾಂಧೀಜಿ ಹಠ ಹಿಡಿದು ಕೂತಿದ್ದರು. ಇದರ ಮಧ್ಯೆ ಬ್ರಿಟೀಷ್ ಪ್ರಧಾನಿ ರಾಮ್‍ಸೆ ಮ್ಯಾಕ್ ಡೊನಾಲ್ಡ್ 1932 ಆಗಸ್ಟ್ 16 ರಂದು ಕಮ್ಯೂನಲ್ ಅವಾರ್ಡ್‍ನಲ್ಲಿ ಪ್ರತ್ಯೇಕ ಮತದಾನ ಕುರಿತು ಸೇರ್ಪಡೆಗೊಳಿಸಿದರು. ಇದಾಗಿದ್ದೇ ತಡ ಮಹಾತ್ಮ ಗಾಂಧೀಜಿ ಪೂನಾದ ಯಾರವಾಡ ಬಂಧೀಖಾನೆಯಲ್ಲಿ ಉಪವಾಸ ಕುಳಿತುಬಿಟ್ಟರು. ಅತ್ತು ಕರೆದು ಗಾಂಧಿ ಮತ್ತು ಅಂಬೇಡ್ಕರ್ ಸಹಿ ಹಾಕುವುದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ, ಬುಡಕಟ್ಟು ವರ್ಗದವರಿಗೂ ಪ್ರತ್ಯೇಕ ಮತ ಕ್ಷೇತ್ರಗಳನ್ನು ಮೀಸಲಿಡಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಅವರು 1936 ರಲ್ಲಿ ‘ಅನ್ಹಿಲೇಷನ್ ಆಫ್ ಕ್ಯಾಸ್ಟ್’ ಎಂಬ ಪುಸ್ತಕವನ್ನು ಹೊರತಂದರು. ಮೇಲ್ವರ್ಗದ ಜನ ಅಷ್ಟೇಕೆ ತಮ್ಮ ಸೇವೆ ಮಾಡುವ ಕುಲಕಸುಬುದಾರರನ್ನು ಕೀಳಾಗಿ ಕಾಣುತ್ತಾರೆ. ಮಡಿ-ಮೈಲಿಗೆ ಹೆಸರಲ್ಲಿ ದೂರ ಇಟ್ಟಿದ್ದಾರೆಂದು ಪ್ರಶ್ನಿಸುವ ಮೂಲಕ ಚರ್ಚೆ ಹುಟ್ಟುಹಾಕಿದರು. ಜಾತಿ ಪದ್ಧತಿ ಆಚರಿಸುವ ಜನ ಶತ್ರುಗಳಲ್ಲ. ಬದಲಿಗೆ ಜಾತೀಯತೆ ಎಂಬ ವಿಷಬೀಜ ಬಿತ್ತುವ ಶಾಸ್ತ್ರಗಳು ನಿಜವಾದ ಶತ್ರುಗಳೆಂದು ಭಾವಿಸಿದ್ದರು.

ಚುನಾವಣಾ ಆಯೋಗ, ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಮತ್ತು ಅಲ್ಪಸಂಖ್ಯಾತರ ಆಯೋಗ, ಮಹಿಳಾ ಆಯೋಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪಿಸಿದರು. 1942 ಜುಲೈ 20 ರಂದು ಆಲ್ ಇಂಡಿಯಾ ಶಾಹಿದ್ ಮಹಿಳಾ ಸಮ್ಮೇಳನ ನಡೆಸಿತು. ಸಮ್ಮೇಳನದಲ್ಲಿ ಮಹಿಳೆಯರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು. ಪುರುಷರ ಗುಲಾಮರಾಗಬಾರದೆಂದು ಕರೆಕೊಟ್ಟರು. ಅಂದಿನ ಪುರುಷಪ್ರಧಾನ ದಿನದಲ್ಲೇ ಮಹಿಳೆಯ ಪರ ಧ್ವನಿ ಎತ್ತಿದ್ದರೆಂದರೆ, ಅಂಬೇಡ್ಕರ್ ಅವರ ಬದ್ಧತೆ, ಕಾಳಜಿಯನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕು. ಆಗಿನ ಆಂಗ್ಲರ ಆಡಳಿತದ ಮುಂದೆ ಮಹಿಳೆಯರು ಪುರುಷರಿಗೆ ಸಮಾನರೆಂದು ವಾದಿಸಿದರು. ಲಿಂಗವನ್ನು ಆಧರಿಸಿ ತಾರತಮ್ಯ ಮತ್ತು ಅಸಮಾನತೆ ಸೃಷ್ಠಿಸುವುದು ಸೂಕ್ತವಲ್ಲ ಎಂದು ಖಂಡಿಸಿದ್ದರು.

ಮಹಾತ್ಮ ಗಾಂಧೀಜಿ ಅವರೊಂದಿಗಿನ ಅಭಿಪ್ರಾಯ ಭೇಧ ಮತ್ತು ಹಿಂದೂ ಧರ್ಮದೊಳಗಿನಲ್ಲಿ ಅಳಿಲಸಲಾಗದಂತೆ ಬೇರುಬಿಟ್ಟಿರುವ ಅಸಮಾನತೆಯಿಂದಾಗಿ 1956 ಅಕ್ಟೋಬರ್ 14 ರಂದು ನಾಗಪುರದ ದೀಕ್ಷ ಭೂಮಿಯಲ್ಲಿ ಹಿಂದೂ ಧರ್ಮ ತ್ಯಜಿಸಿ ಅಂಬೇಡ್ಕರ್ ಬೌದ್ಧ ಧರ್ಮ ಅಪ್ಪಿಕೊಂಡರು. ಇದು ಮುಂದೆ ಬೌದ್ಧ ಮತದ ಚಳವಳಿ ಹರಡಲು ಕಾರಣವಾಯಿತು. 

1956 ಡಿಸೆಂಬರ್ 6 ರಂದು ನವದೆಹಲಿಯ ಆಲಿಪುರ ರಸ್ತೆಯ ಮನೆ ಸಂಖ್ಯೆ 26 ರಲ್ಲಿ ಮಲಗಿದ್ದ ‘ಜಗತ್ತಿನ ಸೂರ್ಯ’ ಮತ್ತೆ ಮೂಡಲೇ ಇಲ್ಲ. ಚಿರನಿದ್ದೆಗೆ ಜಾರಿಬಿಟ್ಟಿದ್ದರು. ಇವರ ಅಂತ್ಯಸಂಸ್ಕಾರದಲ್ಲಿ 10 ಲಕ್ಷಕ್ಕೂ ಅಧಿಕ ಜನ ಪಾಲ್ಗೊಂಡು ರೋಧಿಸಿದರು. ಇದೇ ದಿನ ಒಂದು ಲಕ್ಷ ಜನ ಬೌದ್ಧ ಮತಕ್ಕೆ ಮತಾಂತರಗೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಪುರಾಣದ ಕಾಲದಿಂದಲೂ ಇದ್ದ ಜಾತಿಪದ್ಧತಿ ವಿರುದ್ಧ ಹೋರಾಡಿ ಗೆದ್ದ ಅಂಬೇಡ್ಕರ್ ಸಮಾನತೆ ಇಲ್ಲದ ಹಿಂದೂ ಧರ್ಮ ತ್ಯಜಿಸಿದ್ದರು. ಜೊತೆಗೆ ಹತ್ತು ಲಕ್ಷ ಜನರನ್ನು ಬೌದ್ಧ ಧರ್ಮಕ್ಕೆ ಕರೆದೊಯ್ದಿದ್ದರು. ಕುಲಕಸುಬು ಮಾಡಿಕೊಂಡು ಗುಲಾಮರಂತಿದ್ದ ಜನ ಮತಾಂತರಗೊಂಡು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಪಾಲು ಕೇಳಲು ಮುಂದಾಗುವರೆಂದು ನಂಬಿದ್ದರು. ಇವರ 99ನೇ ಹುಟ್ಟುಹಬ್ಬಕ್ಕೆ ಅಂದರೆ, 1990 ಏಪ್ರಿಲ್ 14 ರಂದು ದೇಶದ ಸರ್ವೋನ್ನತ ‘ಭಾರತ ರತ್ನ’ ಪ್ರಶಸ್ತಿ ನೀಡಲು ಹಿಂದುಳಿದ ವರ್ಗದ ವಿ.ಪಿ.ಸಿಂಗ್ ಪ್ರಧಾನಿಯಾಗಿ ಅಧಿಕಾರಕ್ಕೆ ಬರಬೇಕಾಯಿತು. ಬುಡಕಟ್ಟು ವರ್ಗಗಳ ಪಾಲಿನ ವಿಮೋಚಕನಿಗೆ ದೇಶದ ಆಡಳಿತ ವ್ಯವಸ್ಥೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು 43 ವರ್ಷ ತೆಗೆದುಕೊಂಡಿದೆ. ಇದನ್ನು ನೆನೆದರೆ, ಇದೇನಾ ನನ್ನ ಭಾರತ ಎಂದು ಮರುಕವಾಗುತ್ತದೆ. ‘ಬೆಳಕಿಗಾಗಿ ನೀವು ಕಾಯಬೇಡಿ. ನೀವೇ ಬೆಳಕಾಗಿ’ ಎಂಬ ಅಂಬೇಡ್ಕರ್ ಅವರ ಘೋಷವಾಕ್ಯ ಸದಾ ನನ್ನೆದೆಯಲ್ಲಿ ಪುಟಿಯುತ್ತಲೇ ಇರುತ್ತದೆ.

6ನೇ ಶತಮಾನದ ಬುದ್ಧ, 12ನೇ ಶತಮಾನದ ಬಸವ, 15ನೇ ಶತಮಾನದ ಕನಕ, 18ನೇ ಶತಮಾನದ ಅಂಬೇಡ್ಕರ್ ಅವರುಗಳನ್ನು ಭೂಮಿ ಇರುವವರೆಗೂ ಮರೆಯುವಂತಿಲ್ಲ. ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಿದ್ದ ದೇಶದ ಮೂಲನಿವಾಸಿಗಳು ಎದ್ದು ನಿಲ್ಲಬೇಕು. ಆಡಳಿತ ಅವರ ಕೈಗೆ ಸಿಗಬೇಕೆಂಬುದು ಅಂಬೇಡ್ಕರ್ ಅವರ ಕನಸಾಗಿತ್ತು. ಸಾಮಾಜಿಕ ವ್ಯವಸ್ಥೆಯಲ್ಲಿ ಒಂದೇ ದಿನ ಬದಲಾವಣೆ ತರಲು ಸಾಧ್ಯವಿಲ್ಲ. ಹಂತ, ಹಂತವಾಗಿ ಸೋಷಿಯಲ್ ಇಂಜಿನಿಯರಿಂಗ್ ಕಾರ್ಯರೂಪಕ್ಕೆ ಬರಬೇಕಿದೆ. ಸಂಪೂರ್ಣ ಜಾತಿ ವಿನಾಶಕ್ಕೆ ಕಾಲಾವಕಾಶವೂ ಬೇಕು. ಇದಕ್ಕೆ ಮೀಸಲಾತಿಯಡಿ ರಾಜಕೀಯ ಲಾಭ ಗಳಿಸಿದವರು, ಆರ್ಥಿಕ ಲಾಭ ಗಳಿಸಿದವರು, ಸರ್ಕಾರಿ ಉದ್ಯೋಗಗಳನ್ನು ಪಡೆದವರು ‘ಅಹಿಂದ’ ಎಂದಾಕ್ಷಣ ನೆರವಿನ, ಒಗ್ಗಟ್ಟಿನ ಹಸ್ತ ಚಾಚಬೇಕು.

***