ರಾಜ್ಯ ಬಿಜೆಪಿ ಸರ್ಕಾರ ‘ಆಪರೇಷನ್ ಕಮಲದ ಅನೈತಿಕ ಕೂಸು’: ಮಾಜಿ ಸಿಎಂ ಸಿದ್ದರಾಮಯ್ಯ

243
firstsuddi

ಬೆಳಗಾವಿ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ಥರ ಸಮಸ್ಯೆಗಳ ಬಗ್ಗೆ ಸ್ಪಂಧಿಸುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ದೆಹಲಿ ಟು ಬೆಂಗಳೂರು ಹೀಗೆ ಅಲೆದಾಡುತ್ತಿದ್ದಾರೆ. ಡಿಸಿಎಂ ಯಾರನ್ನಾದರೂ ಮಾಡಿಕೊಳ್ಳಲಿ ನಮಗೇಕೆ? ಆದರೆ ನಾವು ಜನರ ಕಷ್ಟಗಳಿಗೆ ಸಂಧಿಸುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವರಿಗೆ ಭೇಟಿ ಮಾಡಲು ಅವಕಾಶ ಕೊಡುವುದಿಲ್ಲ. ಅವರ ಕೈಯಲ್ಲಿ ರಾಜ್ಯದ ಆಡಳಿತ ಇದೆ. ಈ ಹಿಂದೆ ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದರು ಆದರೆ ಈಗಾ ನಡೆಯುತ್ತಿರುವುದು ಏನು? ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದಿಂದ ಪ್ರವಾಹ ಸಂತ್ರಸ್ಥರಿಗೆ ಎಷ್ಟು ಪರಿಹಾರ ಹಣ ಬಿಡುಗಡೆ ಮಾಡಿದೆ ಎಂಬುವುದನ್ನು ಹೇಳಲಿ. 25 ಮಂದಿ ಸಂಸದರು ಏನು ಮಾಡುತ್ತಿದ್ದಾರೆ? ಅವರೆಲ್ಲರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಟಾಚಾರದ ಭೆಟಿ ನೀಡುತ್ತಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರದ ವಿಶೇಷ ತಂಡ ಬರಬೇಕು ಅಂತಾ ಏನಿಲ್ಲ. ಈಗ ಮಾಡಿರುವ ವರದಿಯನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಪರಿಹಾರವನ್ನು ಬಿಡುಗಡೆ ಮಾಡಬೇಕು. ಪ್ರವಾಹವಾಗಿ 20 ದಿನ ಕಳೆದರು ಕೇಂದ್ರದಿಂದ ಒಂದು ಪೈಸೆ ಪರಿಹಾರ ಕೂಡಾ ಬಂದಿಲ್ಲ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಬೇಕು.

ರಾಜ್ಯ ಬಿಜೆಪಿ ಸರ್ಕಾರ ‘ಆಪರೇಷನ್ ಕಮಲದ ಅನೈತಿಕ ಕೂಸು’. ಹಣ, ಆಮಿಷ, ಒತ್ತಡ ತಂತ್ರ ಉಪಯೋಗಿಸಿ ಶಾಸಕರನ್ನು ಕೊಂಡು, ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿರುವ ಯಡಿಯೂರಪ್ಪನವರ ಸರ್ಕಾರಕ್ಕೆ ಸ್ಪಷ್ಟ ಜನಾದೇಶವಿಲ್ಲ. ಈ ಸರ್ಕಾರ ಯಾವ ಕ್ಷಣದಲ್ಲಾದರೂ ಬಿದ್ದು, ಮಧ್ಯಂತರ ಚುನಾವಣೆ ಬರಬಹುದು.ನಾವೀಗ ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. ನಮ್ಮ ವಿರೋಧಿ ಕೋಮುವಾದಿ ಬಿಜೆಪಿ ಪಕ್ಷವೇ ಹೊರತು ಜೆಡಿಎಸ್ ಅಲ್ಲ. ನಾವ್ಯಾರು ಜೆಡಿಎಸ್ ಪಕ್ಷದವರ ಮೇಲೆ ಹಗೆ ಸಾಧಿಸುತ್ತಿಲ್ಲ. ಜಾತ್ಯಾತೀತ ಶಕ್ತಿಗೆ ಕೋಮುವಾದಿ ಶಕ್ತಿ ವಿರೋಧಿಯಾಗಿರುತ್ತದೆಯೇ ಹೊರತು, ಇನ್ನೊಂದು ಜಾತ್ಯಾತೀತ ಶಕ್ತಿಯಲ್ಲ.ಗೋಕಾಕ, ಕಾಗವಾಡ ಮತ್ತು ಅಥಣಿ ಉಪಚುನಾವಣೆಗೆ ಸಂಬಂಧಿಸಿದಂತೆ ನಮ್ಮ‌ ಪಕ್ಷದಿಂದ ವೀಕ್ಷಕರನ್ನು ನೇಮಿಸಲಾಗಿದೆ. ಅವರು ಈ ಕ್ಷೇತ್ರಗಳ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಸಂಗ್ರಹಿಸಿ ನಮಗೆ ವರದಿ ಸಲ್ಲಿಸುತ್ತಾರೆ. ಆ ವರದಿಯ ಆಧಾರದ ಮೇಲೆ ನಾವು ನಮ್ಮ‌ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದರು.