ಬೆಂಗಳೂರು : ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯನವರ ಅಂತ್ಯಸಂಸ್ಕಾರ ನಗರದ ಜ್ಞಾನಭಾರತಿ ಆವರಣದ ಕಲಾ ಗ್ರಾಮದಲ್ಲಿ ಸಕಾಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಕೊರೊನಾ ಸೋಂಕಿನಿಂದ ನಿನ್ನೆ ಖಾಸಗಿ ಅಸ್ಪತ್ರೆಯಲ್ಲಿ ಮೃತಪಟ್ಟ ಡಾ.ಸಿದ್ದಲಿಂಗಯ್ಯನವರ ಅಂತ್ಯಸಂಸ್ಕಾರ ಇಂದು ಮಲ್ಲತ್ತಹಳ್ಳಿಯ ಕಲಾಗ್ರಾಮದ ಆವರಣದಲ್ಲಿ ಬೌದ್ಧ ಧರ್ಮದ ಸಂಪ್ರದಾಯದಂತೆ ನಡೆಯಿತು. ದಿವಂಗತ ಡಾ. ಶಿವರುದ್ರಪ್ಪ ಮತ್ತು ಅನಂತ ಮೂರ್ತಿರಯವರ ಸ್ಮಾರಕದ ಪಕ್ಕದಲ್ಲಿಯೇ ಸಿದ್ಧಲಿಂಗಯ್ಯನವರ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿದ್ಧಲಿಂಗಯ್ಯ ಅವರ ಪಾರ್ಥಿವ ಶರೀರ ಸಾರ್ವಜನಿಕ ವೀಕ್ಷಣೆ ಬಳಿಕ ಕಲಾಗ್ರಾಮದತ್ತ ಪಾರ್ಥಿವ ಶರೀರ ರವಾನೆ ಮಾಡಲಾಯಿತು. ಮೂರು ಸುತ್ತಿನ ಕುಶಲ ತೋಪು ಸಿಡಿಸಿ ಪೊಲೀಸರು ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಗೌರವ ಸಲ್ಲಿಸಿದರು. ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚಾರಣೆ ಮಾಡಲಾಯಿತು. ಬಳಿಕ ಗೌರವ ಸೂಚಕವಾಗಿ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ಬಾವುಟವನ್ನು ಕುಟುಂಬದ ಸದಸ್ಯರಿಗೆ ಅಶ್ವತ್ ನಾರಾಯಣ್ ಹಸ್ತಾಂತರ ಮಾಡಿದರು. ದಲಿತ ಸಂಘಟನೆಯಿಂದ ಓ ನನ್ನ ಚೇತನ ಹಾಡು ಹೇಳುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ಬೌದ್ಧ ಬಿಕ್ಕುಗಳಿಂದ ಅಂತಿಮ ವಿಧಿವಿದಾನ ನೆರವೇರಿತು. ಪುತ್ರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಅಂತ್ಯಕ್ರಿಯೆ ವೇಳೆ ಡಿಸಿಎಂ ಅಶ್ವಥ್ ನಾರಾಯಣ್, ಶಾಸಕ ಮುನಿರತ್ನ, ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತಿತರರು ಹಾಜರಿದ್ದರು.










