ಸಕಲ ಸೇನಾ ಗೌರವಗಳೊಂದಿಗೆ ಸಿಡಿಎಸ್ ಬಿಪಿನ್ ರಾವತ್ ಅಂತ್ಯ ಸಂಸ್ಕಾರ…

57
firstsuddi

ನವದೆಹಲಿ : ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಾಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ಇಂದು ಸಕಲ ಸೇನಾ ಗೌರವಗಳೊಂದಿಗೆ ದೆಹಲಿಯ ಕಂಟೋನ್ಮೆಂಟ್ ಸ್ಕ್ವೇರ್ ಚಿತಾಗಾರದಲ್ಲಿ ನೆರವೇರಿತು.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಮರಾಜ್ ಮಾರ್ಗ್ ನಿವಾಸದಲ್ಲಿ ರಾವತ್ ದಂಪತಿ ಭೌತಿಕ ಕಾರ್ಯಗಳು ನಡೆಯಿತು. ರಾವತ್ ದಂಪತಿಗೆ ನಮನ ಸಲ್ಲಿಸಲು ಬಂಧು-ಬಾಂಧವರಿಗೆ ಮಧ್ಯಾಹ್ನ 2ಗಂಟೆವರೆಗೂ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಕಾಮರಾಜ್ ಮಾರ್ಗದಿಂದ ಕಂಟೋನ್ಮೆಂಟ್ ನ ಬ್ರಾರ್ ಸ್ಕ್ವೇರ್ ಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗಿತ್ತು. ಚಿತಾಗಾರಕ್ಕೆ ಬರುತ್ತಿದ್ದಂತೆ ಪಾರ್ಥಿವ ಶರೀರವನ್ನು 6 ಸೇನಾಧಿಕಾರಿಗಳು ಹೊತ್ತು ಸಾಗಿದರು. 800 ಸೇನಾಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದು, 17 ಸುತ್ತು ಕುಶಾಲತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಲಾಯಿತು. ತಲಾ 99 ಮಂದಿ ಇರುವ ಭೂಸೇನೆ, ನೌಕಾ ಸೇನೆ, ವಾಯುಸೇನೆಯ ಬ್ಯಾಂಡ್‍ನಿಂದ ಗೌರವ ನಮನ ಸಲ್ಲಿಸಲಾಯಿತು. ಸಂಜೆ 4:30 ಗಂಟೆಗೆ ಧೌಲಾಖಾನ್ ನ ಬ್ರಾರ್ ಕ್ರಿಮೆಟೋರಿಯಂನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಸಿಡಿಎಸ್ ದಂಪತಿ ಅಂತ್ಯಕ್ರಿಯೆ ನಡೆಯಿತು. ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅಂತಿಮ ವಿಧಿವಿಧಾನ ನೆರವೇರಿಸಿದರು.ಅಂತ್ಯಕ್ರಿಯೆ ವೇಳೆ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ಕಿರಣ್ ರಿಜಿಜು, ಫ್ರಾನ್ಸ್​ನ ಭಾರತದ ರಾಯಭಾರಿ ಇಮ್ಯಾನುಯೆಲ್ ಲೆನೈನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.