ಸತತ 8ನೇ ಬಾರಿಗೆ ಬಜೆಟ್ ಮಂಡನೆ: ಇತಿಹಾಸ ಬರೆಯಲು ಸಚಿವೆ ನಿರ್ಮಲಾ ಸೀತಾರಾಮನ್ ಸಜ್ಜು.

24

ಸತತ ಎಂಟನೇ ಬಾರಿ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಮೂಲಕ ದಾಖಲೆ ಬರೆಯಲಿದ್ದಾರೆ. ಮಂದಗತಿ ಆರ್ಥಿಕ ಬೆಳವಣಿಗೆ, ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಪ್ರಮುಖ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಬಜೆಟ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ನಿರ್ಮಲಾ ಸೀತಾರಾಮನ್ ಅವರು ಫೆ. 2024 ರ ಮಧ್ಯಂತರ ಬಜೆಟ್ ಸೇರಿದಂತೆ ಒಟ್ಟು 7 ಬಜೆಟ್‍ಗಳನ್ನು ಮಂಡಿಸಿದ್ದಾರೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಸತತ 8 ವರ್ಷಗಳ ಕಾಲ ಕೇಂದ್ರ ಬಜೆಟ್ ಅನ್ನು ಮಂಡಿಸುವುದರ ಮೂಲಕ ದಾಖಲೆ ಬರೆಯಲು ಅವರು ಸಜ್ಜಾಗಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಸ್ಲ್ಯಾಬ್‍ಗಳಲ್ಲಿ ಪ್ರಮುಖ ಬದಲಾವಣೆ ತರಲು ಸಜ್ಜಾಗಿದ್ದಾರೆ ಎಂಬ ವರದಿಗಳು ಹರಿದಾಡುತ್ತಿರುವುದರಿಂದ ಎಲ್ಲರ ಕಣ್ಣುಗಳು ಆದಾಯ ತೆರಿಗೆ ಸ್ಲ್ಯಾಬ್‍ಗಳ ಮೇಲೆ ನೆಟ್ಟಿವೆ. ಕೇಂದ್ರ ಸರ್ಕಾರದ 2025-2026ನೇ ಸಾಲಿನ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇದರೊಂದಿಗೆ ಸತತ 8ನೇ ಬಜೆಟ್ ಮಂಡಿಸಿದ ಮೊದಲ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.