ರಾಷ್ಟ್ರಪತಿ ಮುರ್ಮುಗೆ ಪೂವರ್ ಲೇಡಿ ಎಂದ ಸೋನಿಯಾ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ.

23

ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪೂವರ್ ಲೇಡಿ ಎಂದು ಹೇಳಿದ ಒಂದು ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.  ಬಜೆಟ್ ಅಧಿವೇಶನದ ಮುನ್ನ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರಪತಿಗಳ ಭಾಷಣ ಮುಕ್ತಾಯದ ನಂತರ ಸಂಸತ್ ಹೊರಗಡೆ ಬಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಸೋನಿಯಾ ಗಾಂಧಿ, ಪೂವರ್ ಲೇಡಿ ಭಾಷಣ ಮುಗಿಸುವ ಹೊತ್ತಿಗೆ ರಾಷ್ಟ್ರಪತಿಗಳು ಸುಸ್ತಾಗಿ ಹೋಗಿದ್ದರು. ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾಷಣ ತುಂಬಾ ಬೋರ್ ಆಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿ ದ್ರೌಪತಿ ಮುರ್ಮು ಅವರನ್ನು ಪೂವರ್ ಲೇಡಿ ಎಂದು ಕರೆದಿದ್ದಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಬುಡಕಟ್ಟು ಮಹಿಳೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದನ್ನು ಸಹಿಸಲು ಕಾಂಗ್ರೆಸ್‍ಗೆ ಆಗುತ್ತಿಲ್ಲ. ಕೂಡಲೇ ಸೋನಿಯಾ ಗಾಂಧಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.