ಸದನದಲ್ಲಿ ಬಿಎಸ್‍ವೈ ವಿದಾಯ ಭಾಷಣ – ಟ್ವೀಟ್ ಮೂಲಕ ಮೋದಿ ಮೆಚ್ಚುಗೆ…

58
firstsuddi

ಬೆಂಗಳೂರು : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸದನದಲ್ಲಿ ಮಾಡಿದ ವಿದಾಯದ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಫೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಬಿಎಸ್‍ವೈ ಅತ್ಯಂತ ಭಾವುಕತೆಯಿಂದ ವಿದಾಯದ ಭಾಷಣ ಮಾಡಿದರು. ಇದು ನನ್ನ ಕೊನೆಯ ಅಧಿವೇಶನ. ನಾನು ಮುಂದಿನ ಅಧಿವೇಶನಕ್ಕೆ ಬರುವುದಿಲ್ಲ. ಏಕೆಂದರೆ ನಾನು ತಿಳಿಸಿದಂತೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದರು.

ಪಕ್ಷದ ಏಳಿಗೆಗಾಗಿ, ಪಕ್ಷವನ್ನು ಬೆಳೆಸಲು ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಈ ಸದನದವನ್ನು ಅಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಯಶಸ್ವಿಯಾಗಿ ನಡೆಸಿದ್ದಾರೆ. ನೀವು ಮುಂದಿನ ಬಾರಿ ಮಂತ್ರಿಯಾಗಿ ಇಲ್ಲಿ ಕೂರಬೇಕು. ಇಲ್ಲಿ ಮಹಿಳೆಯರು ಹೆಚ್ಚು ಆಯ್ಕೆ ಆಗಬೇಕು ಎಂದು ನುಡಿದರು.

ಶಿಕಾರಿಪುರದ ಜನರಿಗೆ ಧನ್ಯವಾದ ತಿಳಿಸಿದ ಯಡಿಯೂರಪ್ಪ, ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಫೆಬ್ರವರಿ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಪ್ರಧಾನಿ ನರೇಂದ್ರ ಮೋದಿ ನನ್ನ ಹುಟ್ಟು ಹಬ್ಬಕ್ಕೆ ಬರಲಿದ್ದಾರೆ. ಅಂದೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ ಎಂದರು.

ನಮಗೆಲ್ಲರಿಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಆದರ್ಶ. ಈ ವಯಸ್ಸಿನಲ್ಲೂ ಕೂಡ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಹೆಚ್.ಡಿ.ದೇವೇಗೌಡರನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ ಎಂದು ಹೇಳಿದರು.