ಸಮಾಜದಲ್ಲಿ ಹೆಣ್ಣಿನ ಸಂಖ್ಯೆ ಹೆಚ್ಚಳವಾಗದಿದ್ದಲ್ಲಿ ಭವಿಷ್ಯದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ : ಡಾ|| ಎಸ್.ಸೀಮಾ.

86
firstsuddi

ಚಿಕ್ಕಮಗಳೂರು : ಸಮಾಜದಲ್ಲಿ ಹೆಣ್ಣಿನ ಸಂಖ್ಯೆ ಹೆಚ್ಚಳವಾಗದಿದ್ದಲ್ಲಿ ಭವಿಷ್ಯದಲ್ಲಿ ಮಹಿಳಾ ಸಮೂಹ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲ್ಲೂಕು ವೈಧ್ಯಾಧಿಕಾರಿ ಡಾ|| ಎಸ್.ಸೀಮಾ ಹೇಳಿದರು.

ಭಾರತ ಸೇವಾದಳದ ಜಿಲ್ಲಾ ಘಟಕ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಏರ್ಪಡಿಸಿದ್ದ ಮಹಿಳಾ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರ ಕಾಲದಲ್ಲಿ ಸಮಾಜದಲ್ಲಿ ಗಂಡು ಹೆಣ್ಣಿನ ಸಂಖ್ಯೆ ಸಮವಾಗಿರುತ್ತಿತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ಗಂಡಿನ ಸಂಖ್ಯೆ ಹೆಚ್ಚಳವಾಗಿ ಹೆಣ್ಣಿನ ಸಂಖ್ಯೆ ಕಡಿಮೆಯಾಗುತ್ತಿದೆ, ಎಲ್ಲಾ ಆಸ್ಪತ್ರೆಗಳಲ್ಲೂ ಹೆಣ್ಣು ಮಗುವಿಗಿಂತ ಗಂಡು ಮಗುವಿನ ಜನನ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ವಿಷಾದಿಸಿದರು.

ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಸಮಾಜದಲ್ಲಿ ಮಹಿಳೆಯರ ಸಂಖ್ಯೆ ಕ್ಷೀಣಿಸುತ್ತದೆ ಅದರಿಂದಾಗಿ ಸ್ತ್ರೀ ಕುಲದ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಹೆಚ್ಚುತ್ತದೆ ಎಂದು ಎಚ್ಚರಿಸಿದರು.

ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆಯನ್ನು ನಿಲ್ಲಿಸಬೇಕು, ಭ್ರೂಣ ಹತ್ಯೆ ಕಂಡು ಬಂದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳ ಸಹಾಯವಾಣಿಗೆ ತಕ್ಷಣ ಕರೆ ಮಾಡಬೇಕು. ನಾಗರೀಕರು ಮನ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಿ ಆರ್.ಸವಿತಾ ಮಾತನಾಡಿ ಮಹಿಳೆಯರ ಅಭಿವೃದ್ದಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಬ್ಯಾಂಕುಗಳು ರೂಪಿಸಿರುವ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಸೌಲಭ್ಯಗಳನ್ನು ವಿವರಿಸಿದರು.

ನ್ಯಾಯವಾದಿ ಮಮತಾ ಮಹಿಳೆಯರ ರಕ್ಷಣೆಗಿರುವ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ನಡುವೆ ಮಹಿಳೆಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಕೆ.ಕಲ್ಮರುಡಪ್ಪ, ಖಜಾಂಚಿ ಎಸ್.ಎಸ್.ಜಗದೀಶಾಚಾರ್, ಜಿಲ್ಲಾ ಸಂಘಟಕ ಚಂದ್ರಕಾಂತ್, ಶಿಕ್ಷಕರಾದ ಶ್ರೀನಿವಾಸ್, ಮೀನಾಕ್ಷಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಎನ್.ಚರಣ್‍ರಾಜ್ ಉಪಸ್ಥಿತರಿದ್ದರು.