ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಯುವಕ, ಇಬ್ಬರ ರಕ್ಷಣೆ…

46
firstsuddi

ಕಾರವಾರ: ಸಮುದ್ರಕ್ಕೆ ಇಳಿದಿದ್ದ ಮೂವರು ಪ್ರವಾಸಿಗರ ಪೈಕಿ ಇಬ್ಬರನ್ನು ರಕ್ಷಣೆ ಮಾಡಿದ್ದು, ಓರ್ವ ಕೊಚ್ಚಿಹೋಗಿರುವಂತಹ ಘಟನೆ ಇಂದು ಮುರುಡೇಶ್ವರದಲ್ಲಿ ನಡೆದಿದೆ.

ಹುಬ್ಬಳ್ಳಿಯ ಸಂತೋಷ್ ಹುಲಿಗುಂಡ (19) ಸಮುದ್ರಪಾಲಾದ ಯುವಕನಾಗಿದ್ದು, ಹಸನ್ ಮಜಗೀಗೌಡ (20) ಹಾಗೂ ಸಂಜೀವ್ (20) ಎಂಬುವವರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಅಲೆಗೆ ಕೊಚ್ಚಿಹೋದ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ಹಾಗೂ ಕಲಘಟಗಿಯಿಂದ 22 ಜನ ಪ್ರವಾಸಕ್ಕೆ ಬಂದಿದ್ದು, ಸಿಗಂದೂರು, ಕೊಲ್ಲೂರು ಪ್ರವಾಸ ಮುಗಿಸಿ ಮುರುಡೇಶ್ವರಕ್ಕೆ ಬಂದಿದ್ದರು. ಚಂಡಮಾರುತದ ಪರಿಣಾಮ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ, ಸಮುದ್ರಕ್ಕೆ ಇಳಿಯದಂತೆ ಸೂಚನಾ ಫಲಕ ಹಾಕಿದ್ದರೂ ನಿರ್ಲಕ್ಷ್ಯ ತೋರಿ ಮೂರು ಜನ ಪ್ರವಾಸಿಗರು ಸಮುದ್ರಕ್ಕಿಳಿದಿದ್ದಾರೆ. ಇದರಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.