ಸರ್ಕಾರಿ ನೌಕರರು, ಐಟಿ ಪಾವತಿದಾರರ ಬಿಪಿಎಲ್ ಕಾರ್ಡ್ ಮಾತ್ರ ರದ್ದು, ಅರ್ಹರ ಕಾರ್ಡ್ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡಿ: ಸಿಎಂ.

35

ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪಡಿತರ ಚೀಟಿ ರದ್ದುಗೊಳಿಸುವಿಕೆ ವಿವಾದಕ್ಕೆ ಗುರಿಯಾಗಿದೆ. ಈ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನೂ ರದ್ದು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಬಿಟ್ಟು ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಬಡ ಕುಟುಂಬದವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಅನರ್ಹ ಪಡಿತರ ಕಾರ್ಡ್‍ಗಳನ್ನು ಮಾತ್ರ ರದ್ದುಪಡಿಸಲಾಗುತ್ತಿದೆ ಎಂದು ಈ ಮೊದಲು ಸಿಎಂ ಭರವಸೆ ನೀಡಿದ್ದರು. ಆದರೂ ಕೆಲವೆಡೆ ಬಿಪಿಎಲ್ ಕಾರ್ಡ್ ರದ್ದಾಗಿರುವುದು ಮತ್ತು ಎಪಿಎಲ್‍ಗೆ ವರ್ಗಾವಣೆ ಆಗಿರುವುದು ತಿಳಿದು ಬಂದಿದ್ದು, ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ.
ಅರ್ಹರ ಬಿಪಿಎಲ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಮಾಡಲ್ಲ. ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್‍ಗಳನ್ನು ಎಪಿಎಲ್‍ಗೆ ಬದಲಾವಣೆ ಮಾಡಲಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಬಿಪಿಎಲ್ ಕಾರ್ಡ್ ಸಮಗ್ರವಾಗಿ ಪರಿಷ್ಕರಣೆ ಮಾಡುವಂತೆ ಮತ್ತು ಅರ್ಹರಲ್ಲದವರನ್ನು ಎಪಿಎಲ್‍ಗೆ ಸೇರಿಸಲು ಸಿಎಂ ಸೂಚಿಸಿದ್ದಾರೆ. ಪರಿಷ್ಕರಣೆ ವೇಳೆ ಕೈತಪ್ಪಿ ಹೋದ್ರೆ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದರು.