ಬೆಂಗಳೂರು: ಸಹಾಯವಾಣಿ ಹೆಸರಿನಲ್ಲಿ ಕರೆ ಮಾಡಿ ಮಹಿಳೆಗೆ ಎರಡು ಲಕ್ಷ ರೂಪಾಯಿ ವಂಚಿಸಲಾಗಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬ್ಯಾಂಕ್‍ಗಳು ಸಹಾಯವಾಣಿಗಳನ್ನು ತೆರೆದಿರುತ್ತವೆ. ಬ್ಯಾಂಕ್‍ಗಳ ಈ ಕ್ರಮವನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಂಡು ಮಹಿಳೆಗೆ ವಂಚಿಸಿದ್ದಾರೆ. ಬೆಂಗಳೂರಿನ 58 ವರ್ಷದ ಮಹಿಳೆಯೊಬ್ಬರಿಗೆ ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ವಂಚಕ ಕರೆ ಮಾಡಿ, ನಿಮ್ಮ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂಪಾಯಿ ಹಣ ವರ್ಗಾವಣೆಯಾಗುತ್ತಿದೆ, ಈ ಹಣವನ್ನ ನೀವೇ ವರ್ಗಾಯಿಸಿದ್ದರೆ ಮೂರನ್ನು ಒತ್ತಿ, ಇಲ್ಲವಾಗಿದ್ದಲ್ಲಿ ಒಂದನ್ನು ಒತ್ತಿ ಎಂದು ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ಒಂದನ್ನು ಒತ್ತಿದ್ದಾರೆ. ನಂತರ, ವಂಚಕ ನಿಮ್ಮ ಬ್ಯಾಂಕ್ ಮ್ಯಾನೇಜರ್‍ರನ್ನು ಸಂಪರ್ಕಿಸಿ ಎಂದು ಕರೆ ಕಟ್ ಮಾಡಿದ್ದಾನೆ. ಅನುಮಾನಗೊಂಡ ಮಹಿಳೆ ಬ್ಯಾಂಕ್‍ಗೆ ತೆರಳಿ ವಿಚಾರಿಸಿದಾಗ ಖಾತೆಯಲ್ಲಿದ್ದ ಎರಡು ಲಕ್ಷ ರೂಪಾಯಿ ಹಣ ಮಾಯವಾಗಿತ್ತು. ತಕ್ಷಣ ಮಹಿಳೆ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿಗೆ ಪ್ರಾಥಮಿಕ ದೂರು ನೀಡಿದ್ದಾಳೆ.










