ಕಲಬುರಗಿ ಶಾಲೆಗೆ ಬಾಂಬ್ ಬೆದರಿಕೆ.

44

ಕಲಬುರಗಿ: ನಗರದ ಹೊಸ ಜೇವರ್ಗಿ ರಸ್ತೆ ಕೆಇಬಿ ಕಲ್ಯಾಣ ಮಂಟಪ ಹತ್ತಿರ ಇರುವ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿರುವ ಬಗ್ಗೆ ವರದಿಯಾಗಿದೆ. ಕಲಬುರಗಿಯ ಕರುಣೇಶ್ವರ ನಗರದಲ್ಲಿರುವ ವಿಧಾನಪರಿಷತ್ ಸದಸ್ಯ ಬಿ.ಜಿ ಪಾಟೀಲ್ ಒಡೆತನದ ಚಂದ್ರಕಾಂತ ಪಾಟೀಲ್ ಶಾಲೆಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿದೆ. ಮಧ್ಯಾಹ್ನ 1 ಗಂಟೆಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಸಂದೇಶ ಕಂಡ ಕೂಡಲೆ ಶಾಲೆಯ ಸಿಬ್ಬಂದಿ ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ. ಅಶೋಕ ನಗರ ಠಾಣೆ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಶಾಲೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬೆದರಿಕೆ ಸಂದೇಶ ತಮಿಳುನಾಡಿನಿಂದ ಬಂದಿದೆ ಎಂದು ಶಂಕಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಶಾಲೆಗೆ ಕಲಬುರಗಿ ನಗರ ಪೋಲಿಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಪರಿಶೀಲನೆ ನಡೆಸಿದೆ. ಮೇಲ್‍ನಲ್ಲಿ ತಮಿಳುನಾಡಿನ ರಾಜಕೀಯದ ಕುರಿತು ಉಲ್ಲೇಖಿಸಲಾಗಿದೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತೇವೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.